ದೇಶದಲ್ಲಿ ಐದು ಅತ್ಯಧಿಕ ಮಾಲಿನ್ಯದ ನಗರಗಳ ಪಟ್ಟಿಯಲ್ಲಿ ಉತ್ತರಪ್ರದೇಶದ 3 ನಗರಗಳು

Update: 2020-11-09 17:43 GMT

ಲಕ್ನೊ, ನ.9: ಚಳಿಗಾಲ ಇನ್ನೇನು ಆರಂಭವಾಗುವ ಸಂದರ್ಭದಲ್ಲೇ ದಿಲ್ಲಿ- ರಾಷ್ಟ್ರೀಯ ರಾಜಧಾನಿ ಪ್ರದೇಶ ಹಾಗೂ ಉತ್ತರಪ್ರದೇಶದ ಹಲವು ನಗರಗಳ ಜನತೆಗೆ ಮಾಲಿನ್ಯದ ಸಮಸ್ಯೆ ಮತ್ತೆ ಎದುರಾಗಿದೆ. ಉತ್ತರಪ್ರದೇಶದ ಹಲವು ನಗರಗಳನ್ನು ಹೊಗೆಯ ದಪ್ಪ ವಲಯ ಆವರಿಸಿದ್ದು ಜನತೆ ಉಸಿರಾಟದ ಸಮಸ್ಯೆಯ ಜತೆಗೆ ಕಣ್ಣಿನ ಉರಿಯ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ದೇಶದಲ್ಲಿ ಐದು ಅತ್ಯಂತ ಹೆಚ್ಚು ಮಾಲಿನ್ಯದ ನಗರಗಳ ಪೈಕಿ ಉತ್ತರಪ್ರದೇಶದಲ್ಲೇ ಮೂರು ನಗರಗಳಿವೆ. ತಾಜ್‌ಮಹಲ್ ಇರುವ ಆಗ್ರಾ ನಗರದಲ್ಲಿ ವಾಯುಗುಣಮಟ್ಟ ಸೂಚ್ಯಂಕ 458 ಅಂಕಕ್ಕೇರಿದ್ದು ಅಪಾಯದ ಮುನ್ಸೂಚನೆ ನೀಡಿದೆ. ಜೊತೆಗೆ, ಗಾಳಿಯಲ್ಲಿರುವ ಕಾರ್ಬನ್ ಮೊನೊಕ್ಸೈಡ್ ಪ್ರಮಾಣವೂ ಸಾಮಾನ್ಯ ಮಟ್ಟಕ್ಕಿಂತ 50 ಪಟ್ಟು ಹೆಚ್ಚು ದಾಖಲಿಸಿದೆ ಎಂದು ವರದಿಯಾಗಿದೆ. ಉತ್ತರಪ್ರದೇಶದ ಆಗ್ರಾ, ಗಾಝಿಯಾಬಾದ್ ಮತ್ತು ಗ್ರೇಟರ್‌ನೋಯ್ಡಾ ನಗರಗಳು ದೇಶದಲ್ಲಿ ಅತೀ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಮೊದಲ ಐದು ಕ್ರಮಾಂಕದಲ್ಲಿದೆ. ಗಾಝಿಯಾಬಾದ್ ದೇಶದ ಅತ್ಯಧಿಕ ಮಲಿನ ನಗರಗಳಲ್ಲಿ ಎರಡನೇ ಸ್ಥಾನದಲ್ಲಿದ್ದು ಈ ನಗರದ ವಾಯುಗುಣಮಟ್ಟ ಸೂಚ್ಯಂಕ 456ರಲ್ಲಿದೆ.

ಗ್ರೇಟರ್‌ನೋಯ್ಡಾದ ವಾಯುಗುಣಮಟ್ಟ ಸೂಚ್ಯಂಕ 440 ಮತ್ತು ರಾಜ್ಯದ ರಾಜಧಾನಿ ಲಕ್ನೊದ ವಾಯುಗುಣಮಟ್ಟ ಸೂಚ್ಯಂಕ 392ರಲ್ಲಿದೆ. ಉತ್ತರಪ್ರದೇಶ, ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣ ಕೃಷಿ ತ್ಯಾಜ್ಯ(ಕೂಳೆ)ಯನ್ನು ಸುಡುವುದು ಎಂದು ಮೂಲಗಳು ಹೇಳಿವೆ. ಸಾಧ್ಯವಿದ್ದಷ್ಟು ಮಟ್ಟಿಗೆ ಮನೆಯೊಳಗೇ ಇರುವಂತೆ ಹಿರಿಯರು, ಸಣ್ಣ ಮಕ್ಕಳು ಹಾಗೂ ಕಣ್ಣಿನ ಸಮಸ್ಯೆಯಿರುವವರಿಗೆ ವೈದ್ಯರು ಸಲಹೆ ನೀಡಿದ್ದಾರೆ. ದ್ವಿಚಕ್ರ ವಾಹನ ಚಾಲಕರಿಗೆ ಮಾಸ್ಕ್‌ನ ಜೊತೆಗೆ ಕನ್ನಡಕ ಧರಿಸುವಂತೆ ಸಲನ ನೀಡಿದೆ. ಸರಕಾರ ವಾಯುಮಾಲಿನ್ಯದ ಬಗ್ಗೆ ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ದೀಪಾವಳಿ ಸಂದರ್ಭ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News