ತ್ರಿಪುರಾ: ದೀಪಾವಳಿಗೆ ಪಟಾಕಿ ನಿಷೇಧ
ಅಗರ್ತಲ,ನ.9: ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ, ತ್ರಿಪುರಾ ಸರಕಾರವು ಪಟಾಕಿಗಳನ್ನು ಸಿಡಿಸುವುದಕ್ಕೆ ನಿಷೇಧ ಸೇರಿದಂತೆ ಕೋವಿಡ್ ಸಾಂಕ್ರಾಮಿಕದ ಹಾವಳಿಯ ನಿಯಂತ್ರಣಕ್ಕೆ ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳನ್ನು ಸೋಮವಾರ ಜಾರಿಗೊಳಿಸಿದೆ.
ಹಬ್ಬದ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಪೂಜಾ ಸಮಿತಿ ಸದಸ್ಯರು ಹಾಗೂ ಸಂದರ್ಶಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ತ್ರಿಪುರಾದಲ್ಲಿ ಕಾಳಿ ಪೂಜೆಯನ್ನು ದೀಪಾವಳಿ ಸಂದರ್ಭದಲ್ಲಿ ಆಚರಿಸಲಾಗುತ್ತಿದ್ದು ಪೆಂಡಾಲ್‌ಗಳಲ್ಲಿ ಸ್ಥಾಪಿಸಲಾಗುವ ವಿಗ್ರಹವು 5 ಅಡಿಗಿಂತ ಅಧಿಕ ಎತ್ತರವಿರಕೂಡದೆಂದು ರಾಜ್ಯ ಸರಕಾರದ ಕಾರ್ಯದರ್ಶಿ ಮನೋಜ್ ಕುಮಾರ್ ಪ್ರಕಟಿಸಿರುವ ಮಾರ್ಗದರ್ಶಿ ಸೂತ್ರಗಳಲ್ಲಿ ಸೂಚಿಸಲಾಗಿದೆ.
ಜನಜಂಗುಳಿಯುಂಟಾಗುವುದನ್ನು ತಪ್ಪಿಸಲು ತೆರೆದ ಬಯಲಿನಲ್ಲಿ ಪೂಜಾ ಪೆಂಡಾಲ್‌ಗಳನ್ನು ಸ್ಥಾಪಿಸಬೇಕು ಎಂದು ಆದೇಶವು ತಿಳಿಸಿದೆ. ಹಾಗೆಯೇ ಪೆಂಡಾಲ್‌ಗಳ ಮುಂದೆ ಜಾತ್ರೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಕೂಡಾ ನಿಷೇಧಿಸಲಾಗಿದೆ. ಯಾವುದೇ ರೀತಿಯ ಮೆರವಣಿಗೆಗಳನ್ನು ನಡೆಸದೆಯೇ ವಿಗ್ರಹಗಳನ್ನು ಪೆಂಡಾಲ್‌ಗಳಿಗೆ ತರಬೇಕೆಂದು ಉತ್ಸವಗಳ ಸಂಘಟಕರಿಗೆ ಸೂಚನೆ ನೀಡಲಾಗಿದೆ.
ಒಂದು ಬಾರಿಗೆ ಕೇವಲ ಐದು ಸಂದರ್ಶಕರು ಮಾತ್ರವೇ ಪೆಂಡಾಲ್‌ಗೆ ಭೇಟಿ ನೀಡಬಹುದಾಗಿದೆ ಹಾಗೂ ಅವರು ಪೆಂಡಾಲ್‌ನಿಂದ ಒಂದು ಮೀಟರ್ ದೂರದಲ್ಲಿ ನಿಂತುಕೊಳ್ಳಬೇಕಾಗುತ್ತೆ. ಪೂಜಾ ದಿನದಂದು ಪೆಂಡಾಲ್ ಅನ್ನು ದಿವಸಕ್ಕೆ ಮೂರು ಬಾರಿ ಸ್ಯಾನಿಟೈಸ್ ಮಾಡಬೇಕಾಗುತ್ತದೆ ಮತ್ತು ಕೈತೊಳೆಯುವ ಸ್ಯಾನಿಟಿನಿಟೈಸರ್‌ಗಳು ಹಾಗೂ ಮಾಸ್ಕ್‌ಗನ್ನು ಪೆಂಡಾಲ್‌ನ ಸಮೀಪದಲ್ಲೇ ಇರಿಸಬೇಕು ಎಂದು ಎಂದು ಮಾರ್ಗದರ್ಶಿ ಸೂತ್ರಗಳು ತಿಳಿಸಿವೆ.
ಮನೆಗಳಲ್ಲಿ ಕಾಳಿ ಪೂಜೆ ಮಾಡುವವರು 15ರಿಂದ 20ರಷ್ಟು ಅತಿಥಿಗಳನ್ನು ಮಾತ್ರವೇ ಸ್ವಾಗತಿಸಬಹುದಾಗಿದೆ. 51 ಶಕ್ತಿಪೀಠಗಳಲ್ಲಿ ಒಂದಾದ ತ್ರಿಪುರಾದ ತ್ರಿಪುರಸುಂದರಿ ದೇವಾಲಯದಲ್ಲಿನ ಪೂಜಾ ಕಾರ್ಯಕ್ರಮಗಳಿಗೆ ಪ್ರತ್ಯೇಕವಾದ ಮಾರ್ಗದರ್ಶಿ ಸೂತ್ರಗಳನ್ನು ಸರಕಾರವು ಪ್ರಕಟಿಸಲಿದೆ ಎದಂು ಮೂಲಗಳು ತಿಳಿಸಿವೆ.