ಪರಸ್ಪರ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ; ಚೀನಾ, ಪಾಕ್‌ಗೆ ಪ್ರಧಾನಿ ಮೋದಿ ಕಠಿಣ ಸಂದೇಶ

Update: 2020-11-10 17:22 GMT

ಹೊಸದಿಲ್ಲಿ, ನ.10: ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸದಸ್ಯ ರಾಷ್ಟ್ರಗಳೊಂದಿಗೆ ಭಾರತ ಸದೃಢ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಸಂಬಂಧ ಹೊಂದಿದೆ. ಈ ಸಂಬಂಧವನ್ನು ವರ್ಧಿಸಲು, ಪರಸ್ಪರ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತಾ ಮುಂದುವರಿಯಬೇಕು ಎಂಬುದು ಭಾರತದ ನಿಲುವಾಗಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಚೀನಾ ಮತ್ತು ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದ್ವಿಪಕ್ಷೀಯ ಸಮಸ್ಯೆಗಳನ್ನು ಎಸ್‌ಸಿಒ ಕಾರ್ಯಸೂಚಿಯಲ್ಲಿ ಸೇರಿಸಲು ನಡೆಸುತ್ತಿರುವ ಅನಗತ್ಯ ಪ್ರಯತ್ನ ವಿಷಾದನೀಯ. ಈ ಕ್ರಮ ಎಸ್‌ಸಿಒದ ಸ್ವರೂಪ ಮತ್ತು ತಾತ್ಪರ್ಯದ ಉಲ್ಲಂಘನೆಯಾಗಿದೆ ಎಂದು ಹೇಳಿದರು. ತಮ್ಮ 9 ನಿಮಿಷಗಳ ಭಾಷಣದಲ್ಲಿ, ಭಯೋತ್ಪಾದನೆ ಮತ್ತು ಡ್ರಗ್ಸ್ ಕಳ್ಳಸಾಗಣೆಯ ವಿರುದ್ದ ಭಾರತದ ತೀವ್ರ ವಿರೋಧವನ್ನು ಪುನರುಚ್ಚರಿಸಿದ ಪ್ರಧಾನಿ, ಭಾರತ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಬಯಸುತ್ತದೆ. ಭಯೋತ್ಪಾದನೆ, ಅಕ್ರಮ ಶಸ್ತ್ರಾಸ್ತ್ರ ವರ್ಗಾವಣೆ, ಡ್ರಗ್ಸ್ ಮತ್ತು ಹಣದ ಅಕ್ರಮ ಸಾಗಣೆಗೆ ಭಾರತದ ವಿರೋಧವಿದೆ. ಎಸ್‌ಸಿಒ ಘೋಷಣಾ ಪತ್ರದಲ್ಲಿ ಉಲ್ಲೇಖಿಸಿರುವ ತತ್ವಗಳ ಪ್ರಕಾರ ಕಾರ್ಯನಿರ್ವಹಿಸಲು ಭಾರತ ಸದಾ ಬದ್ಧವಿದೆ ಎಂದು ಹೇಳಿದರು. ಶೃಂಗಸಭೆಯ ಕಾರ್ಯಸೂಚಿಯಲ್ಲಿ ಸದಸ್ಯ ರಾಷ್ಟ್ರಗಳ ನಿರೀಕ್ಷೆಗಳು, ಸಮಕಾಲೀನ ಸವಾಲುಗಳು ಹಾಗೂ ಜಾಗತಿಕ ವಾಸ್ತವಗಳನ್ನು ಪ್ರತಿಬಿಂಬಿಸುವ, ಮಾನವ ಕಲ್ಯಾಣದಂತಹ ವಿಷಯಗಳನ್ನು ಸೇರಿಸಬೇಕೆಂದು ಮೋದಿ ಅಭಿಪ್ರಾಯಪಟ್ಟರು.

ರಶ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಚೀನಾ, ಭಾರತ, ಪಾಕಿಸ್ತಾನ, ಕಝಕ್‌ಸ್ತಾನ, ಕಿರ್ಗಿಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ ದೇಶದ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News