ಮನಪಾ ಆಡಳಿತಕ್ಕೆ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನ ಖಾಲಿ ಮಾಡುವ ತರಾತುರಿ: ಅಬ್ದುಲ್ ರವೂಫ್

Update: 2020-11-11 07:42 GMT

ಮಂಗಳೂರು, ನ.11: ಮಂಗಳೂರು ಮಹಾನಗರ ಪಾಲಿಕೆ ಆಡಳಿತ ವರ್ಗವು ಸ್ಮಾರ್ಟ್ ಸಿಟಿ ಅನುದಾನವನ್ನು ಖಾಲಿ ಮಾಡುವ ತರಾತುರಿಯಲ್ಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಅಬ್ದುಲ್ ರವೂಫ್ ಬಜಾಲ್ ಆರೋಪಿಸಿದರು.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು ಸ್ಮಾರ್ಟ್ ಸಿಟಿ ಮತ್ತು ಮನಪಾ ಮಧ್ಯೆ ಹೊಂದಾಣಿಕೆಯೇ ಇಲ್ಲ. ಯಾವುದೇ ದೂರದೃಷ್ಟಿಯೂ ಇಲ್ಲ. ಬೇಕಾಬಿಟ್ಟಿ ಕಾಮಗಾರಿ ಮಾಡುತ್ತಿದ್ದಾರೆ. ನಗರದ ಹಂಪನಕಟ್ಟೆ, ಬಂದರ್, ಕಾರ್‌ಸ್ಟ್ರೀಟ್, ಆರ್‌ಟಿಒ ಬಳಿ ಏಕಕಾಲದಲ್ಲಿ ಕಾಮಗಾರಿ ಆರಂಭಿಸಿದ ಕಾರಣ ಟ್ರಾಫಿಕ್ ಸಮಸ್ಯೆ ಬಿಗಡಾಯಿಸಿದೆ ಎಂದರು.

ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಬದಲು ಗೊತ್ತುಗುರಿಯಿಲ್ಲದ ಕಾಮಗಾರಿ ನಡೆಸಲಾಗುತ್ತಿದೆ. ಬಿಜೆಪಿಗೆ ಆಡಳಿತ ನಡೆಸಲು ಗೊತ್ತೇ ಇಲ್ಲ.‌ ಅನುಭವದ ಕೊರತೆ ಇದೆ. ರಾತ್ರೋರಾತ್ರಿ ತಪಾಸಣೆ ಮಾಡಿ ಬಿಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಮೊಯ್ಲಿ, ಜೆಸಿಂತಾ ವಿಜಯಾ ಆಲ್ಫ್ರೆಡ್, ಕಾರ್ಪೊರೇಟರ್‌ಗಳಾದ ಲ್ಯಾನ್ಸಿಲಾಟ್ ಪಿಂಟೋ, ಲತೀಫ್ ಕಂದಕ್, ಅಶ್ರಫ್ ಬಜಾಲ್, ಸಂಶುದ್ದೀನ್ ಕುದ್ರೋಳಿ, ನವೀನ್ ಡಿಸೋಜ, ಎ.ಸಿ.ವಿನಯರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News