ಸೋಲಿನ ಹೊರತಾಗಿಯೂ ಟ್ರಂಪ್ ಎರಡನೇ ಅಧಿಕಾರಾವಧಿಗೆ ಸಿದ್ಧತೆ ಮಾಡುತ್ತಿರುವ ಶ್ವೇತಭವನ: ಅಧಿಕಾರಿ

Update: 2020-11-14 05:56 GMT

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತಿರುವ ಹೊರತಾಗಿಯೂ ಅವರ ಎರಡನೇ ಅಧಿಕಾರಾವಧಿಗೆ ಶ್ವೇತಭವನ ಸಿದ್ಧತೆ ನಡೆಸುತ್ತಿದೆ ಎಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

"ಟ್ರಂಪ್ ಅವರ ಎರಡನೇ ಅವಧಿ ಇರಬಹುದು ಎಂದು ಅಂದುಕೊಂಡು ನಾವು ಇಲ್ಲಿ ಶ್ವೇತಭವನದಲ್ಲಿ ಮುಂದಿನ ಹೆಜ್ಜೆ ಇಡುತ್ತಿದ್ದೇವೆ,'' ಎಂದು  ನಿರ್ಗಮನ ಅಧ್ಯಕ್ಷರ ವ್ಯಾಪಾರ ಸಲಹೆಗಾರ ಪೀಟರ್ ನವರ್ರೊ ಹೇಳಿದ್ದಾರೆ.

ಡೆಮಾಕ್ರೆಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಅವರು ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರನ್ನು  ಸೋಲಿಸಿದ್ದಾರೆಂದು ಅಮೆರಿಕಾದ ಮಾಧ್ಯಮಗಳು ಘೋಷಿಸಿ ಒಂದು ವಾರವಾದರೂ ಟ್ರಂಪ್ ಇನ್ನೂ ಸೋಲೊಪ್ಪಿಕೊಂಡಿಲ್ಲ.

ನಂತರದ ದಿನಗಳಲ್ಲಿ ಟ್ರಂಪ್ ಅವರು ಸಾರ್ವಜನಿಕವಾಗಿ ಕೆಲವು ಬಾರಿ ಕಾಣಿಸಿಕೊಂಡಿದ್ದರು ಹಾಗೂ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಯಾವುದೇ ಆಧಾರವಿಲ್ಲದೆ ಆರೋಪಿಸಿ ಹಲವು ರಾಜ್ಯಗಳಲ್ಲಿನ ಫಲಿತಾಂಶವನ್ನು ಪ್ರಶ್ನಿಸಿ ಕಾನೂನಿನ ಮೊರೆ ಹೋಗಿದ್ದಾರೆ.

"ನಾವಿಲ್ಲಿ ದೃಢೀಕೃತ ಮತಪತ್ರಗಳನ್ನು ಕೇಳುತ್ತಿದ್ದೇವೆ ಹಾಗೂ ಸಾಕ್ಷಿಗಳು ಸಹಿ ಹಾಕಿದ ಅಫಿಡವಿಟ್‍ಗಳ ಮೂಲಕ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ವಂಚನೆಯ ಆರೋಪಗಳ ಕುರಿತು ತನಿಖೆಗೆ ಆಗ್ರಹಿಸುತ್ತಿದ್ದೇವೆ,'' ಎಂದು ಟ್ರಂಪ್ ಬೆಂಬಲಿಗರ ಆಧಾರರಹಿತ ಆರೋಪಗಳನ್ನು ಮತ್ತೆ ನವರ್ರೊ ಪುನರುಚ್ಛರಿಸಿದ್ದಾರೆ.

ಮತಗಳನ್ನು ತಿರುಚಲು ಹ್ಯಾಕರುಗಳಿಗೆ ಸಾಧ್ಯವಾಗಿರುವ ಕುರಿತಂತೆ "ಯಾವುದೇ ಆಧಾರವಿಲ್ಲ'' ಎಂದು ಅಮೆರಿಕಾದ ಹಿರಿಯ  ಚುನಾವಣಾಧಿಕಾರಿಗಳು  ಈಗಾಗಲೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News