ಕೊರೋನ ಸೋಂಕಿನ ಹಿನ್ನಲೆ: ಶಬರಿಮಲೆಯಲ್ಲಿ ವಿಸ್ತೃತ ಮುನ್ನೆಚ್ಚರಿಕಾ ಕ್ರಮ

Update: 2020-11-14 16:45 GMT
file photo

ತಿರುವನಂತಪುರಂ, ನ.14: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ 2 ತಿಂಗಳಾವಧಿಯ ವಾರ್ಷಿಕ ಮಂಡಲ ಪೂಜಾ ಮಹೋತ್ಸವಕ್ಕೆ ನವೆಂಬರ್ 16ರಿಂದ ಚಾಲನೆ ದೊರಕಲಿದ್ದು, ಈ ಬಾರಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಸ್ತೃತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇರಳದ ದೇವಸ್ವಂ ಇಲಾಖೆಯ ಸಚಿವ ಕಡಕಂಪಳ್ಳಿ ಸುರೇಂದ್ರನ್ ಶುಕ್ರವಾರ ಅಧಿಕಾರಿಗಳೊಂದಿಗೆ ಉನ್ನತ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮದ ಮಾಹಿತಿ ಪಡೆದರು ಎಂದು ವರದಿಯಾಗಿದೆ.

ದೇವಸ್ಥಾನಕ್ಕೆ ಭೇಟಿ ನೀಡಬಯಸುವ ಎಲ್ಲಾ ಯಾತ್ರಾರ್ಥಿಗಳೂ ಕೋವಿಡ್-ಪರೀಕ್ಷೆಯ ನೆಗೆಟಿವ್ ವರದಿಯ ಪ್ರತಿ(24 ಗಂಟೆಯೊಳಗೆ ಪರೀಕ್ಷೆ ನಡೆಸಿರಬೇಕು)ಯನ್ನು ಹೊಂದಿರಬೇಕು.

ಪಂಪಾ ಮತ್ತು ನಿಲಕ್ಕಲ್ ಮೂಲಶಿಬಿರಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಶಬರಿಮಲೆ ಏರುವ ಮುನ್ನ ಯಾತ್ರಾರ್ಥಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಶಬರಿಮಲೆ ಯಾತ್ರಿಗಳು ಆಗಮಿಸುವ ತಿರುವನಂತಪುರಂ, ತಿರುವಲ್ಲ, ಚೆಂಗನ್ನೂರು ಮತ್ತು ಕೊಟ್ಟಾಯಂಗಳ ರೈಲು ಹಾಗೂ ಬಸ್ಸು ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆ ಆ್ಯಂಟಿಜೆನ್ ಟೆಸ್ಟ್ ನಡೆಸಲು ವ್ಯವಸ್ಥೆ ಮಾಡಿದೆ. ಯಾತ್ರಾರ್ಥಿಗಳು ದೇವರ ದರ್ಶನದ ಸಂದರ್ಭ ಸುರಕ್ಷಿತ ಅಂತರ ಪಾಲನೆಗೆ ವ್ಯವಸ್ಥೆ ಮಾಡಲಾಗಿದೆ. 60ರಿಂದ 65 ವರ್ಷದೊಳಗಿನ ಯಾತ್ರಿಗಳು ವೈದ್ಯಕೀಯ ಪ್ರಮಾಣಪತ್ರ ಒದಗಿಸಬೇಕು.

ಸೋಂಕು ಪರೀಕ್ಷೆಯಲ್ಲಿ ಪೊಸಿಟಿವ್ ವರದಿ ಬಂದವರಿಗೆ, ನೆಗೆಟಿವ್ ವರದಿ ಬರುವವರೆಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು. ಯಾತ್ರಿಗಳ ಬೇಡಿಕೆಯಂತೆ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಪಟ್ಟಣಂತಿಟ್ಟ ಮತ್ತು ಕೊಟ್ಟಾಯಂ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಈ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲಿ ಆ್ಯಂಬುಲೆನ್ಸ್ ಸಹಿತ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

 ಶಬರಿಮಲೆ ಬೆಟ್ಟ ಹತ್ತುವಾಗ ಯಾತ್ರಿಗಳು ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಆದರೆ ಸುರಕ್ಷತೆಯ ದೃಷ್ಟಿಯಿಂದ ಯಾತ್ರಿಗಳು ಕೊರೋನ ನಿಯಮವನ್ನು ಕಡ್ಡಾಯವಾಗಿ ಪಾಲಿಸುವುದು ಒಳ್ಳೆಯದು. ಬಳಸಿದ ಮಾಸ್ಕ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಇವನ್ನು ಸಂಗ್ರಹಿಸಿ ಮರು ಬಳಕೆಗೆ ಒದಗಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News