×
Ad

ಈ ಬಾರಿ ಬಿಹಾರ ಉಪಮುಖ್ಯಮಂತ್ರಿಯಾಗಿ ಸುಶೀಲ್ ಕುಮಾರ್ ಆಯ್ಕೆಯಿಲ್ಲ?

Update: 2020-11-15 18:14 IST

ಪಾಟ್ನಾ, ನ. 15: ಬಿಜೆಪಿಯ ತಾರ್‌ಕಿಶೋರ್ ಪ್ರಸಾದ್ ಬಿಹಾರದ ನೂತನ ಉಪ ಮುಖ್ಯಮಂತ್ರಿಯಾಗುವ ಹಾಗೂ ಸುಶೀಲ್ ಕುಮಾರ್ ಮೋದಿ ಅವರಿಗೆ ಕೇಂದ್ರ ಸಂಪುಟದ ಹುದ್ದೆ ದೊರಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಲು ಎಲ್ಲ ಸಿದ್ಧತೆ ನಡೆಯುತ್ತಿರುವ ಒಂದು ದಿನ ಮುನ್ನ ಬಿಹಾರದ ಕಥಿಹಾರದ ಶಾಸಕರಾಗಿರುವ ಪ್ರಸಾದ್ ವಿಧಾನ ಸಭೆಯ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ‘‘ನನಗೆ ಈ ಜವಾಬ್ದಾರಿ ನೀಡಲಾಗಿದೆ. ನನ್ನ ಸಾಮರ್ಥ್ಯ ಮೀರಿ ಕಾರ್ಯ ನಿರ್ವಹಿಸಲಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ನೀವು ಉಪ ಮುಖ್ಯಮಂತ್ರಿಯಾಗಲಿದ್ದೀರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಪ್ರಶ್ನೆಗೆ ಈಗ ಉತ್ತರಿಸಲು ಸಾಧ್ಯವಿಲ್ಲ’ ಎಂದರು. ಬಿಹಾರದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ತರ್‌ಕಿಶೋರ್ ಪ್ರಸಾದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ನಿತೀಶ್ ಕುಮಾರ್ ಅವರ ಕೊನೆಯ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಹಾಗೂ 2020 ವಿಧಾನ ಸಭೆ ಚುನಾವಣೆಯ ಮುನ್ನ ಬಿಹಾರದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರು ಕೂಡ ಆಗಿದ್ದ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ‘‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ ಸಾಕಷ್ಟು ಅವಕಾಶ ನೀಡಿದೆ. ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲಿದ್ದೇನೆ. ಪಕ್ಷದ ಕಾರ್ಯಕರ್ತನ ಹುದ್ದೆಯನ್ನು ಯಾರು ಕಸಿಯಲು ಸಾಧ್ಯವಿಲ್ಲ’’ ಎಂದು ಅವರು ಟ್ವಟ್ಟರ್‌ನಲ್ಲಿ ಬರೆದಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿರುವ ಬೆತಿಯಾದ ಶಾಸಕಿ ರೇಣು ದೇವಿ ಅವರನ್ನು ಸುಶೀಲ್ ಕುಮಾರ್ ಮೋದಿ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News