ಕಾನ್ಪುರ ವೈದ್ಯಕೀಯ ಕಾಲೇಜಿಗೆ ತಲುಪಲಿರುವ ಕೊರೋನ ಲಸಿಕೆ ಸ್ಪುಟ್ನಿಕ್- v

Update: 2020-11-15 14:54 GMT

ಹೊಸದಿಲ್ಲಿ, ನ. 15: ಕೋವಿಡ್‌ಗೆ ರಶ್ಯಾ ಸಂಶೋಧಿಸಿದ ಸ್ಪುಟ್ನಿಕ್-v  ಮುಂದಿನ ವಾರದ ಒಳಗೆ ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿಗೆ ತಲುಪಲಿದ್ದು, 2 ಹಾಗೂ 3ನೇ ಹಂತದ ಮಾನವನ ಮೇಲಿನ ಕ್ಲಿನಿಕಲ್ ಟ್ರಯಲ್ ನಡೆಯಲಿದೆ. ಇದಕ್ಕೆ ಸಂಬಂಧಿಸಿ ಭಾರತ ಔಷಧದ ಪ್ರಧಾನ ನಿಯಂತ್ರಕ (ಡಿಸಿಜಿಐ)ರಿಂದ ಡಾ. ರೆಡ್ಡಿ ಪ್ರಯೋಗಾಲಯ ಅನುಮತಿ ಪಡೆದಿದ್ದು, ಮಾನವನ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ವಾರದಿಂದ ಲಸಿಕೆಯ ಮಾನವನ ಮೇಲೆ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಆರ್.ಬಿ. ಕಮಲ್ ತಿಳಿಸಿದ್ದಾರೆ. ಟ್ರಯಲ್‌ಗೆ 180ಕ್ಕೂ ಅಧಿಕ ಜನ ನೋಂದಣಿ ಮಾಡಿದ್ದಾರೆ. ಸಂಶೋಧನೆಯ ಮುಖ್ಯಸ್ಥ ಸೌರಭ್ ಅಗರ್ವಾಲ್ ನೀಡಬೇಕಾದ ಲಸಿಕೆಯ ಪ್ರಮಾಣ ನಿರ್ಧರಿಸಲಿದ್ದಾರೆ.

ಸ್ವಯಂಸೇವಕರಿಗೆ ಮೊದಲು ಒಂದು ಡೋಸ್ ಲಸಿಕೆ ನೀಡಲಾಗುವುದು. ಅನಂತರ ಅಗತ್ಯತೆಯನ್ನು ಪರಿಶೀಲಿಸಿ ಇನ್ನೊಂದು ಡೋಸ್ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಸ್ವಯಂಸೇವಕರು ಮುಖ್ಯ. ಅವರನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುವುದು. ಲಸಿಕೆ ಯಶಸ್ವಿಯಾಗಿದೆಯೇ, ಇಲ್ಲವೇ ? ಎಂಬ ಬಗ್ಗೆ ನಿರ್ಧರಿಸಲು ವಿಶ್ಲೇಷಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. 21 ದಿನಗಳ ಬಿಡುವಿನೊಂದಿಗೆ ಎರಡನೇ ಹಾಗೂ ಮೂರನೇ ಡೋಸ್ ಲಸಿಕೆ ನೀಡಲಾಗುವುದು. ಅನಂತರ 7 ತಿಂಗಳ ಕಾಲ ಸ್ವಯಂಸೇವಕರ ಮೇಲೆ ಲಸಿಕೆಯ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲಾಗುವುದು. ತಿಂಗಳುಗಳ ಕಾಲ ಲಸಿಕೆಯ ಪರಿಣಾಮ ಪರಿಶೀಲಿಸಿದ ಬಳಿಕ ಪ್ರಯೋಗವನ್ನು ಪ್ರಾಧಿಕಾರ ಅನುಮೋದಿಸಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News