ರೈತನ ಪುತ್ರನ ವಿವಾಹ ಸಮಾರಂಭದಲ್ಲೂ ಕೇಂದ್ರದ ಕೃಷಿ ಕಾನೂನು ವಿರುದ್ಧ ಮೊಳಗಿದ ಘೋಷಣೆ

Update: 2020-11-17 11:19 GMT

ಚಂಡೀಗಢ: ಪಂಜಾಬ್‍ನ ವಿವಿಧೆಡೆ ಕಳೆದ ಹಲವಾರು ದಿನಗಳಿಂದ ರೈತರು ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ  ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಅಲ್ಲಿ ನಡೆದ ರೈತರ ಪುತ್ರನೊಬ್ಬನ ವಿವಾಹ ಸಮಾರಂಭದಲ್ಲೂ ಈ ಕಾನೂನಿನ ವಿರುದ್ಧ ಘೋಷಣೆ ಮೊಳಗಿದೆ.

ರಾಜ್ಯದ ರೇಟ್‍ಗರ್ ಎಂಬ ಗ್ರಾಮದ ರೈತ ಹರ್ನೆಕ್ ಸಿಂಗ್ ಅವರ ಪುತ್ರ ಜಶನ್‍ಜೀತ್ ಅವರ ವಿವಾಹ ಸೋಮವಾರ ನಡೆದಿದೆ. ಆಗ ಪಂಜಾಬ್‍ನಲ್ಲಿ ವಿವಾಹ ಸಮಾರಂಭಗಳಲ್ಲಿ ಹಾಡಲಾಗುವ ಸಾಂಪ್ರದಾಯಿಕ 'ಘೋರಿ' ಗೀತೆಗಳ ಬದಲು ಅವರ ಕುಟುಂಬ ಭಾರತೀಯ ಕಿಸಾನ್ ಯೂನಿಯನ್ (ಉಗ್ರಹಣ್) ಧ್ವಜಗಳನ್ನು ಕೈಗಳಲ್ಲಿ ಹಿಡಿದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದೆ.

"ನಾವು ಸರಕಾರದ ಕೃಷಿ ಕಾನೂನುಗಳ ವಿರುದ್ಧ 24*7 ಹೋರಾಟ ನಡೆಸುತ್ತಿದ್ದೇವೆಂದು ಪ್ರಧಾನಿ ನರೇಂದ್ರ ಮೋದಿಗೆ ತೋರಿಸಬೇಕಿದೆ. ನಮ್ಮ ಜೀವನದ ಅತ್ಯಂತ ಸಂತೋಷದ ಸಂದರ್ಭದಲ್ಲೂ ಈ ಕಾನೂನು ಕುರಿತ ನೋವು ನಮ್ಮನ್ನು ಕಾಡುತ್ತಿದೆ,'' ಎಂದು ಹರ್ನೆಕ್ ಸಿಂಗ್ ಹೇಳಿದ್ದಾರೆ.

"ಇಂದು ನಾನು ಪುತ್ರನ ವಿವಾಹ ಕಾರಣದಿಂದ ಮನೆಯಲ್ಲಿದ್ದೇನೆ. ಆದರೆ ನಾಳೆ ನಾನು ನನ್ನ ಮಗನ ಜತೆಗೂಡಿ ಪ್ರತಿಭಟನೆಯಲ್ಲಿ ಎಂದಿನಂತೆ ಭಾಗಿಯಾಗುತ್ತೇನೆ,'' ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News