ಅಕ್ರಮ ಜೂಜುಗಾರಿಕೆ ಬಗ್ಗೆ ವರದಿ ಮಾಡಿದ ಪತ್ರಕರ್ತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ದುಷ್ಕರ್ಮಿಗಳು
ಗುವಹಾತಿ: ಅಕ್ರಮ ಜೂಜುಗಾರಿಕೆ ಕುರಿತು ವರದಿ ಮಾಡಿದ್ದ ಅಸ್ಸಾಂನ ದೈನಿಕ 'ಪ್ರತಿದಿನ್' ವರದಿಗಾರ ಮಿಲನ್ ಮಹಂತ ಅವರನ್ನು ದುಷ್ಕರ್ಮಿಗಳ ಒಂದು ಗುಂಪು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಕಮ್ರೂಪ್ ಜಿಲ್ಲೆಯ ಮಿರ್ಝಾ ಪಟ್ಟಣದ ಹೃದಯಭಾಗದಲ್ಲಿ ರವಿವಾರ ನಡೆದಿದೆ. ಈ ಆಘಾತಕರ ಘಟನೆಯ ವೀಡಿಯೋ ಕೂಡ ವೈರಲ್ ಆಗಿದೆ. ಹಲ್ಲೆಯಿಂದ ಮಿಲನ್ ಅವರ ತಲೆ, ಕುತ್ತಿಗೆ ಹಾಗೂ ಕಿವಿಗಳ ಭಾಗದಲ್ಲಿ ಗಾಯಗಳಾಗಿವೆ. ರಾಷ್ಟ್ರೀಯ ಮಾಧ್ಯಮ ದಿನದಂದು ನಡೆದ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಮೂಡಿಸಿದೆ.
ಸಭೆಯೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಮಿಲನ್ ಅವರು ದಾರಿ ಮಧ್ಯೆ ಇದ್ದ ಪಾನ್ ಅಂಗಡಿಗೆ ಹೋಗಿದ್ದ ಸಂದರ್ಭ ಏಳು ಮಂದಿ ಅವರನ್ನು ಎಳೆದೊಯ್ದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದರು. ಘಟನೆ ಕುರಿತು ಮಿಲನ್ ಮಹಂತ ಪೊಲೀಸ್ ದೂರು ದಾಖಲಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆಕೋರರು ತಮ್ಮನ್ನು ಅಪಹರಿಸಿ ಕೊಲ್ಲುವ ಸಂಚು ರೂಪಿಸಿದ್ದರು ಎಂದು ಮಿಲನ್ ಆರೋಪಿಸಿದ್ದಾರೆ.
ಘಟನೆಯ ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.