‘Muslim prayer and Quran app’ ಸೇರಿ ಹಲವು ಆ್ಯಪ್ ಗಳು ಅಸುರಕ್ಷಿತ ?

Update: 2020-11-17 13:46 GMT
ಸಾಂದರ್ಭಿಕ ಚಿತ್ರ

ಲಂಡನ್, ನ. 17: ಜನರು ಸುರಕ್ಷಿತ ಎಂದು ಭಾವಿಸಿರುವ ಮೊಬೈಲ್ ಆ್ಯಪ್‌ ಗಳಿಂದ ಅಮೆರಿಕ ಸೇನೆಯು ಜಗತ್ತಿನಾದ್ಯಂತ ಇರುವ ಜನರ ಚಲನವಲನಗಳ ಮಾಹಿತಿಗಳನ್ನು ಖರೀದಿಸುತ್ತಿದೆ ಎನ್ನುವುದನ್ನು 'ಮದರ್‌ ಬೋರ್ಡ್' ಎಂಬ ತಾಂತ್ರಿಕ ವೆಬ್ ಸೈಟ್ ಪತ್ತೆಹಚ್ಚಿದೆ.

'ಮದರ್‌ ಬೋರ್ಡ್' ಪರಿಶೀಲಿಸಿದ ಆ್ಯಪ್ ‌ಗಳ ಪೈಕಿ ಜನರ ಮಾಹಿತಿಗಳನ್ನು ಮಾರಾಟ ಮಾಡುವ ಆ್ಯಪ್ ಗಳಲ್ಲಿ 'ಮುಸ್ಲಿಮ್ ಪ್ರೇಯರ್ ಆ್ಯಂಡ್ ಕುರ್ ‌ಆನ್' ಆ್ಯಪ್ ಅತ್ಯಂತ ಹೆಚ್ಚು ಪ್ರಸಿದ್ಧವಾಗಿದೆ. ಈ ಆ್ಯಪನ್ನು ಜಗತ್ತಿನಾದ್ಯಂತ 9.8 ಕೋಟಿ ಬಾರಿ ಡೌನ್‌ಲೋಡ್ ಮಾಡಲಾಗಿದೆ.

ಬಳಕೆದಾರರ ಮಾಹಿತಿ ಮಾರಾಟದಲ್ಲಿ ತೊಡಗಿರುವ ಇತರ ಆ್ಯಪ್‌ ಗಳೆಂದರೆ ಮುಸ್ಲಿಮ್ ಡೇಟಿಂಗ್ ಆ್ಯಪ್, ಬಿರುಗಾಳಿಗಳ ಬಗ್ಗೆ ಮುನ್ನೆಚ್ಚರಿಕೆ ಪಡೆಯುವುದಕ್ಕಾಗಿ ಬಳಸಲಾಗುವ ಆ್ಯಪ್, ಒಂದು ವರ್ಗೀಕೃತ ಜಾಹೀರಾತುಗಳ ಆ್ಯಪ್ ಮತ್ತು ಮಲಗುವ ಕೋಣೆಗಳಲ್ಲಿ ಕಪಾಟುಗಳನ್ನು ಜೋಡಿಸಿಡುವುದಕ್ಕೆ ನೆರವಾಗುವುದು ಸೇರಿದಂತೆ ವಿವಿಧ ಕೆಲಸಗಳಲ್ಲಿ ಸಹಾಯ ಪಡೆಯುವುದಕ್ಕಾಗಿ ಬಳಸಲಾಗುವ 'ಲೆವೆಲ್' ಆ್ಯಪ್ ಗಳ ಸಹಿತ ಹಲವು ಆ್ಯಪ್ ಗಳು ಸೇರಿವೆ.

ಜನರು ಯಾವ ಸ್ಥಳದಲ್ಲಿದ್ದಾರೆ (ಲೊಕೇಶನ್) ಎನ್ನುವುದರ ಮಾಹಿತಿಗಳನ್ನು ಪಡೆಯಲು ಅಮೆರಿಕ ಸೇನೆಯು ಎರಡು ಪ್ರತ್ಯೇಕ ಹಾಗೂ ಸಮಾನಾಂತರ ಮಾಹಿತಿ ವಾಹಿನಿಗಳನ್ನು ಬಳಸುತ್ತದೆ ಹಾಗೂ ಬಳಸಿದೆ ಎನ್ನುವುದನ್ನು 'ಮದರ್‌ ಬೋರ್ಡ್' ಪತ್ತೆ ಹಚ್ಚಿದೆ.

ಈ ಪೈಕಿ ಒಂದು ವಾಹಿನಿಯು 'ಬ್ಯಾಬಲ್ ಸ್ಟ್ರೀಟ್' ಎಂಬ ಕಂಪೆನಿಯನ್ನು ಬಳಸುತ್ತದೆ. ಬ್ಯಾಬಲ್ ಸ್ಟ್ರೀಟ್ 'ಲೊಕೇಟ್ ಎಕ್ಸ್' ಎನ್ನುವ ಕಾರ್ಯಕ್ರಮವನ್ನು ರೂಪಿಸಿದೆ. ಅಮೆರಿಕ ಸೇನೆಯ ಒಂದು ಭಾಗವಾಗಿರುವ ಅಮೆರಿಕ ವಿಶೇಷ ಕಾರ್ಯಾಚರಣಾ ಕಮಾಂಡ್ ಭಯೋತ್ಪಾದನೆ ನಿಗ್ರಹ, ಬಂಡುಕೋರ ನಿಗ್ರಹ ಮತ್ತು ವಿಶೇಷ ಬೇಹುಗಾರಿಕಾ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿದೆ. ವಿದೇಶಗಳಲ್ಲಿರುವ ವಿಶೇಷ ಪಡೆಗಳ ಕಾರ್ಯಾಚರಣೆಗಾಗಿ ಲೊಕೇಟ್ ಎಕ್ಸ್‌ ನಿಂದ ಪಡೆದುಕೊಳ್ಳಲಾಗಿರುವ ಮಾಹಿತಿಗಳನ್ನು ‘ಕಮಾಂಡ್’ ಬಳಸುತ್ತದೆ.

ಇನ್ನೊಂದು ವಾಹಿನಿಯು ಎಕ್ಸ್-ಮೋಡ್ ಎಂಬ ಕಂಪೆನಿಯ ಮೂಲಕ ಜನರ ಚಲನವಲನಗಳ ಕುರಿತ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಎಕ್ಸ್-ಮೋಡ್ ಜನರು ಯಾವ ಸ್ಥಳದಲ್ಲಿದ್ದಾರೆ ಎನ್ನುವ ಮಾಹಿತಿಗಳನ್ನು ನೇರವಾಗಿ ಆ್ಯಪ್‌ ಗಳಿಂದ ಪಡೆದುಕೊಳ್ಳುತ್ತದೆ ಹಾಗೂ ಬಳಿಕ ಗುತ್ತಿಗೆದಾರರಿಗೆ ಮಾರಾಟ ಮಾಡುತ್ತದೆ. ಗುತ್ತಿಗೆದಾರರ ಮೂಲಕ ಆ ಮಾಹಿತಿಗಳು ಅಮೆರಿಕ ಸೇನೆಯನ್ನು ತಲುಪುತ್ತವೆ.

'ಮದರ್‌ ಬೋರ್ಡ್' ನ ಈ ವರದಿಯು ಅಪಾರದರ್ಶಕವಾಗಿರುವ ಲೊಕೇಶನ್ ಮಾಹಿತಿ ಜಾಲವನ್ನು ಬಯಲುಗೊಳಿಸಿದೆ ಹಾಗೂ ಅಮೆರಿಕ ಸೇನೆಯು ಸೂಕ್ಷ್ಮ ಮಾಹಿತಿಗಳನ್ನು ಖರೀದಿಸುತ್ತದೆ ಎನ್ನುವುದನ್ನೂ ಬಹಿರಂಗಗೊಳಿಸಿದೆ.

ಮುಸ್ಲಿಮರು ಅತಿ ಹೆಚ್ಚು ಬಳಸುವ ಆ್ಯಪ್ ಗಳು

ಬಳಕೆದಾರರ ಮಾಹಿತಿಗಳನ್ನು ಅಮೆರಿಕ ಸೇನೆಗೆ ಮಾರಾಟ ಮಾಡುವ ಈ ಆ್ಯಪ್ ಗಳನ್ನು ತಮಗೆ ಅರಿವಿಲ್ಲದಂತೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಬಳಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಅಮೆರಿಕ ದಶಕಗಳಿಂದ ಸೆಣಸಾಡುತ್ತಿದೆ. ಈ ದಾಳಿಗಳ ಸಂದರ್ಭ ಈ ಆ್ಯಪ್ ಗಳು ಜನರ ಸ್ಥಳಗಳ ಬಗ್ಗೆ ಮಾಹಿತಿ ನೀಡಿರಬಹುದು ಎನ್ನಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾಕ್‌ ಗಳಲ್ಲಿ ಅವೆುರಿಕ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳಲ್ಲಿ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ.

ಆದರೆ, ಅಮೆರಿಕ ಸೇನೆಯು ಯಾವ ನಿರ್ದಿಷ್ಟ ಕಾರ್ಯಾಚರಣೆಗಳಲ್ಲಿ ಆ್ಯಪ್ ಆಧಾರಿತ ಲೊಕೇಶನ್ ಮಾಹಿತಿಗಳನ್ನು ಪಡೆದುಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

'ಮುಸ್ಲಿಮ್ ಪ್ರೊ' ಆ್ಯಪ್‌ನಿಂದ ಗರಿಷ್ಠ ಮಾಹಿತಿ

‘ಎಕ್ಸ್-ಮೋಡ್’‌ ಗೆ ಜನರ ವೈಯಕ್ತಿಕ ಮಾಹಿತಿಗಳನ್ನು ಒದಗಿಸುವ ಆ್ಯಪ್‌ ಗಳ ಪೈಕಿ 'ಮುಸ್ಲಿಮ್ ಪ್ರೊ' ಆ್ಯಪ್ ಸೇರಿದೆ. ನಮಾಝ್ ಸಮಯ ಮತ್ತು ಕಾಬಾದ ದಿಕ್ಕನ್ನು ನೋಡುವುದಕ್ಕಾಗಿ ಮುಸ್ಲಿಮರು ಈ ಆ್ಯಪ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ.

ಈ ಆ್ಯಪನ್ನು ಆ್ಯಂಡ್ರಾಯ್ಡ್ ನಲ್ಲಿ 5 ಕೋಟಿಗೂ ಹೆಚ್ಚು ಬಾರಿ ಹಾಗೂ ಐಫೋನ್ ಸೇರಿದಂತೆ ಇತರ ಮೊಬೈಲ್ ಗಳಲ್ಲಿ 9.8 ಕೋಟಿಗೂ ಅಧಿಕ ಬಾರಿ ಡೌನ್‌ ಲೋಡ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News