ತಂದೆಯ ವಿರುದ್ಧ ದೂರು ನೀಡಲು 10 ಕಿ.ಮೀ ನಡೆದ 6ನೆ ತರಗತಿ ವಿದ್ಯಾರ್ಥಿನಿ

Update: 2020-11-17 16:22 GMT

ಕೇಂದ್ರಪಾರ (ಒಡಿಶಾ), ನ. 17:   ತನಗೆ ಸರಕಾರ ನೀಡುತ್ತಿರುವ ಸೌಲಭ್ಯವನ್ನು ತಂದೆ ಪಡೆದುಕೊಳ್ಳುತ್ತಿರುವ ಬಗ್ಗೆ 6ನೇ ತರಗತಿ ವಿದ್ಯಾರ್ಥಿನಿಯೋರ್ವಳು 10 ಕಿ.ಮೀ. ನಡೆದು ಕೇಂದ್ರ ಪಾರದಲ್ಲಿರುವ ಜಿಲ್ಲಾಧಿಕಗಾರಿ ಅವರಿಗೆ ಸೋಮವಾರ ದೂರು ಸಲ್ಲಿಸಿದ್ದಾಳೆ.

 ತಂದೆಯ ವಿರುದ್ಧ ಬಾಲಕಿಯ ದೂರು ಸ್ವೀಕರಿಸಿರುವ ಕೇಂದ್ರಪಾರ ಜಿಲ್ಲಾಧಿಕಾರಿ ಸಮರ್ಥ್ ವರ್ಮಾ, ಸೌಲಭ್ಯವನ್ನು ಬಾಲಕಿಯ ಖಾತೆಗೆ ನೇರವಾಗಿ ವರ್ಗಾಯಿಸಲು ಹಾಗೂ ಆಕೆಯ ತಂದೆ ಅಕ್ರಮವಾಗಿ ಪಡೆದುಕೊಂಡ ಹಣ ಹಾಗೂ ಅಕ್ಕಿಯನ್ನು ಹಿಂದಿರುಗಿಸಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

   ಲಾಕ್‌ಡೌನ್ ಘೋಷಣೆಯಾದ ಬಳಿಕ ಮಧ್ಯಾಹ್ನದ ಊಟದ ಯೋಜನೆ ಅಡಿಯಲ್ಲಿ ದಿನನಿತ್ಯ 150 ಗ್ರಾಂ. ಅಕ್ಕಿಯನ್ನು ಪೂರೈಸುವುದರೊಂದಿಗೆ ಪ್ರತಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಅಥವಾ ಅವರಿಗೆ ಖಾತೆ ಇಲ್ಲದೇ ಇದ್ದರೆ, ಹೆತ್ತವರ ಖಾತೆಗೆ 8 ರೂಪಾಯಿ ಹಾಕಲಾಗುತ್ತಿತ್ತು.

 ಆದರೆ, ಬ್ಯಾಂಕ್ ಖಾತೆಯನ್ನು ಹೊಂದಿದ ಹೊರತಾಗಿಯ 8 ರೂಪಾಯಿಯನ್ನು ತನ್ನ ತಂದೆಯ ಖಾತೆಗೆ ಜಮೆ ಮಾಡಲಾಗುತ್ತಿದೆ. ತನ್ನ ಜೊತೆ ವಾಸಿಸದ ತಂದೆ ತನ್ನ ಹೆಸರಿನಲ್ಲಿ ಶಾಲೆಯಿಂದ ಅಕ್ಕಿ ಕೂಡ ಸಂಗ್ರಹಿಸುತ್ತಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಳು.

ಬಾಲಕಿಯ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಎರಡನೇ ವಿವಾಹವಾದ ತಂದೆ ಪುತ್ರಿಯನ್ನು ಹೊರಗೆ ಹಾಕಿದ್ದ. ಅನಂತರ ಬಾಲಕಿ ತನ್ನ ಮಾವನ ಮನೆಯಲ್ಲಿ ವಾಸಿಸುತ್ತಿದ್ದಳು.

ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಹಣವನ್ನು ಬಾಲಕಿಯ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದೇವೆ. ಬಾಲಕಿಯ ಹೆಸರಲ್ಲಿ ಆಕೆಯ ತಂದೆ ಪಡೆದುಕೊಂಡ ಹಣವನ್ನು ಹಿಂದೆ ಪಡೆಯಲು ಕ್ರಮ ಕೈಕೊಳ್ಳಲಿದ್ದೇವೆ ಎಂದು ಕೇಂದ್ರಪಾರ ಜಿಲ್ಲೆಯ ಶಿಕ್ಷಣಾಧಿಕಾರಿ ಸಂಜೀಬ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News