ತಮಿಳು ನಟ ಸೆಲ್ವರಥಿನಂ ಅವರ ಇರಿದು ಹತ್ಯೆ

Update: 2020-11-17 17:06 GMT

ಚೆನ್ನೈ, ನ. 17: ತಮಿಳು ಟಿ.ವಿ. ನಟ ಸೆಲ್ವರಥಿನಂ ಅವರನ್ನು ಚೆನ್ನೈನ ಎಂಜಿಆರ್ ನಗರದಲ್ಲಿ ರವಿವಾರ ಇರಿದು ಹತ್ಯೆಗೈಯ್ಯಲಾಗಿದೆ.

41ರ ಹರೆಯದ ಸೆಲ್ವರಥಿನಂ ಟಿ.ವಿ. ಹಾಗೂ ಸಿನೆಮಾ ನಟನಾಗಿ ಜನಪ್ರಿಯರಾಗಿದ್ದರು. ಅವರು ಇತ್ತೀಚೆಗೆ ನಟಿಸಿದ ಧಾರಾವಾಹಿ ‘ತೇನ್‌ಮೋಳಿ ಬಿ.ಎ.’ ಈ ಧಾರಾವಾಹಿ ವಿಜಯ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದೆ.

ಸೆಲ್ವರಥಿನಂ ಕಳೆದ 10 ವರ್ಷಗಳಿಂದ ಮನೋರಂಜನಾ ಉದ್ಯಮದ ಒಂದು ಭಾಗವಾಗಿದ್ದರು. ಶ್ರೀಲಂಕಾದ ನಿರಾಶ್ರಿತರಾಗಿರುವ ಅವರು ತನ್ನ ನಟನೆಯ ಮೂಲಕ ಜನರ ಮನ ಗೆದ್ದಿದ್ದರು. ಅವರ ಪತ್ನಿ ಹಾಗೂ ಮಕ್ಕಳು ವಿರುದ್ಧುನಗರ್ ಜಿಲ್ಲೆಯ ವಲಸಿಗರ ಶಿಬಿರದಲ್ಲಿ ನೆಲೆಸಿದ್ದಾರೆ.

ಸೆಲ್ವರಂಥಿನಂ ಶನಿವಾರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತೆರಳಿರಲಿಲ್ಲ. ಅವರು ಸಹಾಯಕ ನಿರ್ದೇಶಕ ಹಾಗೂ ಗೆಳೆಯ ಮಣಿ ಅವರ ಮನೆಯಲ್ಲಿದ್ದರು. ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಅವರು ಮಣಿ ಮನೆಯಿಂದ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅನಂತರ ತಡ ರಾತ್ರಿ ನೆಡುಂಪಾಥಿಯಲ್ಲಿ ಸೆಲ್ವರಥಿನಂ ಹತ್ಯೆಯಾಗಿರುವ ವಿಷಯ ತಿಳಿಯಿತು. ಕೂಡಲೇ ಮಣಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಅಲ್ಲಿನ ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ ಹತ್ಯೆ ನಡೆದ ಸ್ಥಳದಲ್ಲಿ ನಾಲ್ವರು ವ್ಯಕ್ತಿಗಳು ಸಂದೇಹಾಸ್ಪದ ರೀತಿಯಲ್ಲಿ ಸುಳಿದಾಡುತ್ತಿರುವುದು ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News