ಭ್ರಷ್ಟಾಚಾರ ಆರೋಪಿಗೆ ಸಚಿವ ಸ್ಥಾನ: ಜೆಡಿಯು ವಿರುದ್ಧ ವಿಪಕ್ಷಗಳ ವಾಗ್ದಾಳಿ
ಪಾಟ್ನಾ: ಭ್ರಷ್ಟಾಚಾರ ಪ್ರಕರಣವನ್ನು ಎದುರಿಸುತ್ತಿರುವ ಹೊರತಾಗಿಯೂ ಜೆಡಿಯು ಶಾಸಕ ಮೆವಾಲಾಲ್ ಚೌಧರಿಯವರನ್ನು
ಶಿಕ್ಷಣ ಸಚಿವನಾಗಿ ಆಯ್ಕೆ ಮಾಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಬಿಹಾರದ ಪ್ರಮುಖ ವಿಪಕ್ಷ ಆರ್ ಜೆಡಿ ಹಾಗೂ ಅದರ ಮೈತ್ರಿ ಪಕ್ಷಗಳು ವಾಗ್ದಾಳಿ ನಡೆಸಿವೆ. ಚೌಧರಿಯವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಬೇಡಿಕೆ ಇಟ್ಟಿವೆ.
ಕೃಷಿ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ, ಮೊದಲ ಬಾರಿ ಸಚಿವ ಸ್ಥಾನ ಪಡೆದಿರುವ ಚೌಧರಿ ಐಪಿಸಿ ಸೆಕ್ಷನ್ 420 ಹಾಗೂ 120 ಬಿ ಅಡಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಭ್ರಷ್ಟಾಚಾರ ನಡೆಸಿರುವುದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಚೌಧರಿಗೆ ಬಹುಮಾನ ನೀಡಿದ್ದಾರೆಯೇ? ಲೂಟಿ ನಡೆಸಲು ಸ್ವಾತಂತ್ರ್ಯ ನೀಡಿದ್ದಾರೆಯೇ? ಎಂದು ಟ್ವೀಟರ್ ಮೂಲಕ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದರು.
ಭಾಗಲ್ಪುರ ಜಿಲ್ಲೆಯ ಸಬೌರ್ ನಲ್ಲಿರುವ ಬಿಹಾರ ಕೃಷಿ ವಿವಿಯಲ್ಲಿ ಉಪ ಕುಲಪತಿ ಆಗಿದ್ದಾಗ ನೇಮಕಾತಿಯಲ್ಲಿ ಅಕ್ರಮ ನಡೆಸಿರುವ ಆರೋಪದಲ್ಲಿ 2017ರಲ್ಲಿ 67ರ ವಯಸ್ಸಿನ ಚೌಧರಿ ವಿರುದ್ಧ ಎಫ್ ಐಆರ್ ದಾಖಲಾದ ಬಳಿಕ ಜೆಡಿಯು ಪಕ್ಷದಿಂದ ಅವರನ್ನು ಅಮಾನತುಗೊಳಿಸಲಾಗಿತ್ತು. ಆಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಚೌಧರಿ ವಿರುದ್ಧ ದೊಡ್ಡ ಧ್ವನಿ ಎತ್ತಿತ್ತು.