ಲಡಾಖ್: ಸೇನೆಗೆ ಅತ್ಯಾಧುನಿಕ ಜೀವನ ಸೌಲಭ್ಯದ ವ್ಯವಸ್ಥೆ

Update: 2020-11-18 13:31 GMT

ಹೊಸದಿಲ್ಲಿ, ನ.18: ಪ್ರತೀ ವರ್ಷ ನವೆಂಬರ್ ಬಳಿಕ ಸುಮಾರು 40 ಅಡಿಯಷ್ಟು ಹಿಮಪಾತವಾಗುವ ಮತ್ತು ತಾಪಮಾನ ಮೈನಸ್ 40 ಡಿಗ್ರಿಗೆ ಕುಸಿಯುವ ಪೂರ್ವ ಲಡಾಖ್‌ನಲ್ಲಿ ನಿಯೋಜಿತವಾಗಿರುವ ಭಾರತೀಯ ಸೇನೆಗೆ ಅತ್ಯಾಧುನಿಕ ಜೀವನ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂಯೋಜಿತ ಸೌಲಭ್ಯವಿರುವ ಅತ್ಯಾಧುನಿಕ ಸ್ಮಾರ್ಟ್ ಶಿಬಿರಗಳು, ಟೆಂಟ್‌ನೊಳಗೆ ಬಿಸಿ ಉಷ್ಣತೆ ಇರುವ ವ್ಯವಸ್ಥೆ, ವಿದ್ಯುತ್, ನೀರು, ಹೀಟರ್ ಸೌಲಭ್ಯದ ಜೊತೆಗೆ ಆರೋಗ್ಯ ಮತ್ತು ನೈರ್ಮಲ್ಯ ರಕ್ಷಣೆಯ ಕಡೆಗೂ ಗಮನ ನೀಡಲಾಗಿದೆ. ಚಳಿಗಾಲದಲ್ಲಿ ಸೇನೆಯ ಕಾರ್ಯನಿರ್ವಹಣೆಯ ಕ್ಷಮತೆಯನ್ನು ಇದು ಖಾತರಿಪಡಿಸುತ್ತದೆ ಎಂದು ಭಾರತೀಯ ಸೇನೆಯ ಹೇಳಿಕೆ ತಿಳಿಸಿದೆ. ಈ ಬೆಳವಣಿಗೆ, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗಿನ ಬಿಕ್ಕಟ್ಟಿನ ಬಳಿಕ ಪೂರ್ವ ಲಡಾಖ್‌ನಲ್ಲಿ ಸೇನೆಯನ್ನು ಸುದೀರ್ಘಾವಧಿಗೆ ನೆಲೆಗೊಳಿಸಲು ಭಾರತ ಸಜ್ಜಾಗಿರುವ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗಿದೆ. ವ್ಯೂಹಾತ್ಮಕವಾಗಿ ಮಹತ್ವವಾಗಿರುವ ಪೂರ್ವ ಲಡಾಖ್ ಪ್ರದೇಶದಲ್ಲಿ ನಿಯೋಜಿತವಾಗಿರುವ ಮುಂಚೂಣಿ ಪಡೆಗಳಿಗೆ ಬೆಚ್ಚಗಿನ ಟೆಂಟ್ ಸೌಲಭ್ಯದ ಜೊತೆಗೆ, ಯೋಧರ ತುರ್ತು ಅಗತ್ಯಗಳನ್ನು ಪೂರೈಸಲು ಅಗತ್ಯವಿರುವ ನಾಗರಿಕ ಸೌಲಭ್ಯಗಳನ್ನೂ ಒದಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News