ಚುನಾವಣಾ ಆಯೋಗದ ವಿರುದ್ಧ ತೇಜ್‌ಬಹಾದುರ್ ಅರ್ಜಿ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

Update: 2020-11-18 13:39 GMT

ಹೊಸದಿಲ್ಲಿ, ನ.18: ವಜಾಗೊಂಡಿರುವ ಬಿಎಸ್‌ಎಫ್ ಯೋಧ ತೇಜ್ ಬಹಾದುರ್ ಚುನಾವಣಾ ಆಯೋಗದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಎದುರು ಸ್ಪರ್ಧಿಸಲು ತಾನು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಬಹಾದುರ್ ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿಹಾಕಿತ್ತು. ಇದರ ವಿರುದ್ಧ ಬಹಾದುರ್ ಸುಪ್ರೀಂ ಮೊರೆ ಹೋಗಿದ್ದರು. 

ಬುಧವಾರ ಅರ್ಜಿ ವಿಚಾರಣೆ ಸಂದರ್ಭ ಬಹಾದುರ್ ಪರ ವಕೀಲರು, ಅರ್ಜಿಯ ವಿಚಾರಣೆ ಮುಂದೂಡುವಂತೆ ಕೋರಿದರು. ಆದರೆ ಈ ಹಂತದಲ್ಲಿ ಅವರನ್ನು ತರಾಟೆಗೆತ್ತಿಕೊಂಡ ನ್ಯಾಯಪೀಠ, ವಿಚಾರಣೆ ಮುಂದೂಡಿಕೆಯ ಸೌಲಭ್ಯವನ್ನು ನಿಮಗೆ ನೀಡುವ ಅಗತ್ಯವಿದೆಯೇ ಎಂದು ಪ್ರಶ್ನಿಸಿತು. ಕಾನೂನು ಪ್ರಕ್ರಿಯೆಯನ್ನು ನಿಂದಿಸಿರುವ ನೀವು ಈಗ ವಾದ ಮಾಡುತ್ತಿದ್ದೀರಿ ಎಂದು ಅಸಮಾಧಾನ ಸೂಚಿಸಿತು. ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತೇಜ್‌ಬಹಾದುರ್, ಮತ್ತೊಮ್ಮೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದ್ದ ಚುನಾವಣಾ ಆಯೋಗ ನಾಮಪತ್ರವನ್ನು ತಿರಸ್ಕರಿಸಿತ್ತು. ಗಡಿಯಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಒದಗಿಸಲಾಗುತ್ತಿದೆ ಎಂದು ಆರೋಪಿಸಿ ವೀಡಿಯೊವನ್ನು ಆನ್‌ಲೈನ್ ಮೂಲಕ ಪ್ರಸಾರ ಮಾಡಿದ್ದ ಹಿನ್ನೆಲೆಯಲ್ಲಿ 2017ರಲ್ಲಿ ಬಹಾದುರ್‌ರನ್ನು ಬಿಎಸ್‌ಎಫ್‌ನಿಂದ ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News