ಕಾಂಗ್ರೆಸ್ ತಳಮಟ್ಟದಲ್ಲಿ ಸಾಂಸ್ಥಿಕ ಅಸ್ತಿತ್ವ ಕಳೆದುಕೊಂಡಿದೆ: ಪಿ. ಚಿದಂಬರಂ

Update: 2020-11-18 15:43 GMT

ಭೋಪಾಲ್, ನ. 18: ಕಪಿಲ್ ಸಿಬಲ್ ಬಳಿಕ ಕಾಂಗ್ರೆಸ್‌ನ ಉನ್ನತ ನಾಯಕತ್ವವನ್ನು ಟೀಕಿಸಿರುವ ಮತ್ತೋರ್ವ ಹಿರಿಯ ನಾಯಕ ಪಿ. ಚಿದಂಬಂರ, ಬಿಹಾರ ವಿಧಾನ ಸಭೆ ಚುನಾವಣೆ ಹಾಗೂ ಉಪ ಚುನಾವಣೆ ಫಲಿತಾಂಶಗಳು ಕಾಂಗ್ರೆಸ್ ತಳಮಟ್ಟದಲ್ಲಿ ಸಾಂಸ್ಥಿಕ ಅಸ್ತಿತ್ವ ಕಳೆದುಕೊಂಡಿರುವುದು ಅಥವಾ ಗಣನೀಯವಾಗಿ ದುರ್ಬಲಗೊಂಡಿರುವುದನ್ನು ಬಹಿರಂಗಪಡಿಸಿದೆ ಎಂದಿದ್ದಾರೆ.

ಚುನಾವಣಾ ಸೋಲಿನಿಂದಾಗಲಿ, ನಾಯಕತ್ವದ ಒಡಕಿನಿಂದಾಗಲಿ ಯಾವುದೇ ರೀತಿಯಲ್ಲಿ ಬಾಧಿತರಾಗದ ಪಿ. ಚಿದಂಬರಂ ಅವರು ದಿನಪತ್ರಿಕೆಯೊಂದರ ಸಂದರ್ಶನದಲ್ಲಿ, ಪಕ್ಷ ಬಿಹಾರದಲ್ಲಿ ಸ್ಪರ್ಧಿಸಬೇಕಾಗಿದ್ದ ಕ್ಷೇತ್ರಗಳಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು ಎಂದಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕೊರೋನ ವೈರಸ್ ಬಿಕ್ಕಟ್ಟು ಹಾಗೂ ಆರ್ಥಿಕ ನಿಧಾನಗತಿಯ ನಿರ್ವಹಣೆಯ ವಿಷಯಗಳು ಇದ್ದ ಹೊರತಾಗಿಯೂ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿನ್ನಡೆ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ, ‘‘ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದ ಉಪ ಚುನಾವಣೆಯ ಫಲಿತಾಂಶದಿಂದ ನಾನು ಹೆಚ್ಚು ಚಿಂತಿತನಾಗಿದ್ದೇನೆ. ಈ ಫಲಿತಾಂಶ ಪಕ್ಷ ತಳಮಟ್ಟದಲ್ಲಿ ಸಾಂಸ್ಥಿಕ ಅಸ್ತಿತ್ವವನ್ನು ಕಳೆದುಕೊಂಡಿದೆ ಅಥವಾ ಗಣನೀಯವಾಗಿ ದುರ್ಬಲಗೊಂಡಿದೆ ಎಂಬುದನ್ನು ಬಹಿರಂಗಪಡಿಸಿದೆ’’ ಎಂದರು.

‘‘ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್‌ಗೆ ಜಯ ಗಳಿಸುವ ಅವಕಾಶ ಇತ್ತು. ಆದರೆ, ಗೆಲುವಿನ ಹತ್ತಿರ ಬಂದರೂ ನಾವು ಯಾಕೆ ಪರಾಭವಗೊಂಡೆವು ಎಂಬ ಬಗ್ಗೆ ಸಮಗ್ರವಾಗಿ ಪರಿಶೀಲಿಸಬೇಕಾದ ಅಗತ್ಯ ಇದೆ. ಇತ್ತೀಚೆಗೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ಜಾರ್ಖಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿರುವುದನ್ನು ನೆನಪಿಸಿಕೊಳ್ಳಿ’’ ಎಂದು ಅವರು ಹೇಳಿದ್ದಾರೆ.

‘‘ತಳಮಟ್ಟದಲ್ಲಿ ಸಾಂಸ್ಥಿಕವಾಗಿ ಗಟ್ಟಿಯಾಗಿದ್ದರೆ ಸಿಪಿಐ-ಎಂಎಲ್ ಹಾಗೂ ಎಐಎಂಐಎಂನಂತಹ ಸಣ್ಣ ಪಕ್ಷಗಳು ಕೂಡ ಉತ್ತಮ ಸಾಧನೆ ತೋರಲು ಸಾಧ್ಯ ಎಂಬುದನ್ನು ಬಿಹಾರ ಚುನಾವಣೆ ಸಾಬೀತು ಮಾಡಿದೆ. ಬಿಜೆಪಿ ನೇತೃತ್ವದ ಮೈತ್ರಿ ಕೂಟಕ್ಕಿಂತ ಪ್ರತಿಪಕ್ಷಗಳ ಮೈತ್ರಿ ಕೂಟ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯ. ಆದರೆ, ಅದನ್ನು ಸೋಲಿಸಲು ನಮ್ಮ ಪಕ್ಷ ತಳಮಟ್ಟದಲ್ಲಿ ಬಲಿಷ್ಠವಾಗಬೇಕು’’ ಎಂದು ಅವರು ಹೇಳಿದರು. ‘‘ಕಾಂಗ್ರೆಸ್ ತನ್ನ ಸಾಂಸ್ಥಿಕ ಸಾಮರ್ಥ್ಯಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿತು ಎಂಬುದು ನನ್ನ ಭಾವನೆ. ಬಿಜೆಪಿ ಅಥವಾ ಅದರ ಮಿತ್ರ ಪಕ್ಷಗಳು ಕಳೆದ 20 ವರ್ಷಗಳಿಂದ ಜಯ ಗಳಿಸುತ್ತಿದ್ದ 25 ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ನೀಡಲಾಗಿತ್ತು. ಈ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಿರಾಕರಿಸಬೇಕಿತ್ತು. ಪಕ್ಷವು ಕೇವಲ 45 ಮಂದಿ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಬೇಕಿತ್ತು’’ ಎಂದು ಪಿ. ಚಿದಂಬರಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News