ಬುಮ್ರಾ, ಶಮಿ ಆಸ್ಟ್ರೇಲಿಯ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡುವ ಸಾದ್ಯತೆ ಇಲ್ಲ

Update: 2020-11-18 18:35 GMT

ಹೊಸದಿಲ್ಲಿ, ನ: ಭಾರತದ ಪ್ರಮುಖ ಸ್ಟ್ರೈಕ್ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಮುಹಮ್ಮದ್ ಶಮಿ ಅವರು ಆಸ್ಟ್ರೇಲಿಯ ವಿರುದ್ಧ ಮುಂಬರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡುವ ಸಾಧ್ಯತೆಯಿಲ್ಲ. ಏಕೆಂದರೆ ಡಿಸೆಂಬರ್ 17ರಿಂದ ಪ್ರಾರಂಭವಾಗುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇವರನ್ನು ಆಡಿಸಲು ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸಿದೆ.

 ಟೀಮ್ ಇಂಡಿಯಾ ತನ್ನ ಎರಡು ತಿಂಗಳ ಆಸ್ಟ್ರೇಲಿಯ ಪ್ರವಾಸವನ್ನು ಮೂರು ಏಕದಿನ ಪಂದ್ಯಗಳೊಂದಿಗೆ ಆರಂಭಿಸಲಿದೆ. ಬಳಿಕ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳು ನವೆಂಬರ್ 27ರಿಂದ ಡಿಸೆಂಬರ್ 8ರವರೆಗೆ ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯಲಿವೆ.

ಬಿಸಿಸಿಐ ನಂಬಲರ್ಹ ಮೂಲಗಳ ಪ್ರಕಾರ ಇಶಾಂತ್ ಶರ್ಮಾ ಪ್ರಥಮ ಟೆಸ್ಟ್‌ಗೆ ಲಭ್ಯವಾಗದೆ ಇದ್ದಲ್ಲಿ ಶಮಿ ಮತ್ತು ಬುಮ್ರಾ ಹೆಗಲ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಪ್ರಧಾನ ಕೋಚ್ ರವಿಶಾಸ್ತ್ರಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದಾಗಿ ಬುಮ್ರಾ ಮತ್ತು ಶಮಿ ಅವರ ಕೆಲಸದ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದಾರೆ. ಡ್ರಮ್ನಾಯ್ನಾ ಓವಲ್‌ನಲ್ಲಿ ಟೆಸ್ಟ್ ತಯಾರಿಗೆ ಮೊದಲ ಅಭ್ಯಾಸ ಪಂದ್ಯವನ್ನು ಡಿಸೆಂಬರ್ 6ರಿಂದ 8ರ ತನಕ ಆಯೋಜಿಸಲಾಗುವುದು. ಬುಮ್ರಾ ಮತ್ತು ಶಮಿ ಇಬ್ಬರೂ ಏಕದಿನ ಪಂದ್ಯಗಳನ್ನು ಆಡಬಹುದು. ಆದರೆ ಅಲ್ಲಿ ಅವರು ತಮ್ಮ 10 ಓವರ್‌ಗಳಿಗಿಂತ ಹೆಚ್ಚು ಬೌಲಿಂಗ್ ನಡೆಸುವಂತಿಲ್ಲ. ಹೀಗೆ ಮಾಡಿದರೆ ಅವರು ಅಭ್ಯಾಸ ಪಂದ್ಯಗಳನ್ನು ಆಡುವ ಮೂಲಕ ಟೆಸ್ಟ್ ಪಂದ್ಯಗಳಿಗೆ ಹೊಂದಿಕೊಳ್ಳಬಹುದು. ಇದು ಹಗಲು-ರಾತ್ರಿ ಟೆಸ್ಟ್ ಪಂದ್ಯದ ತಯಾರಿಗೆ ಅನುಕೂಲವಾಗಬಹುದು ಎಂಬ ನಿಟ್ಟಿನಲ್ಲೂ ಬಿಸಿಸಿಐ ಚಿಂತನೆ ನಡೆಸಿದೆ.

   

ವಾಸ್ತವವಾಗಿ ಡಿಸೆಂಬರ್ 11ರಿಂದ 13ರ ವರೆಗೆ ಎಸ್‌ಸಿಜಿಯಲ್ಲಿ ಪಿಂಕ್ ಬಾಲ್ ಟೆಸ್ಟ್ ತಯಾರಿಗೆ ಅಭ್ಯಾಸ ಪಂದ್ಯ ನಡೆಯಲಿದೆ. ಟ್ವೆಂಟಿ-20 ಮೊದಲ ಪಂದ್ಯಕ್ಕೆ ಅಂತಿಮ ಇಲೆವೆನ್‌ನಲ್ಲಿ ದೀಪಕ್ ಚಹರ್, ತಂಗರಾಸು ‘ಯಾರ್ಕರ್’, ನಟರಾಜನ್ ಮತ್ತು ನವದೀಪ್ ಸೈನಿ ಚಹಾಲ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಸ್ಪಿನ್ ದಾಳಿಯಲ್ಲಿ ಚಹಲ್, ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಭಾಗವಹಿಸುವುದನ್ನು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News