ವುಹಾನ್: ಕೋವಿಡ್ ಪ್ರಕರಣ ವರದಿ ಮಾಡಿದ ನಾಗರಿಕ ಪತ್ರಕರ್ತೆಗೆ ಜೈಲು!

Update: 2020-11-19 04:02 GMT

ವುಹಾನ್, ನ.19: ನಗರದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆ ವರದಿ ಮಾಡಿದ ನಾಗರಿಕ ಪತ್ರಕರ್ತೆಗೆ ಐದು ವರ್ಷದ ಜೈಲು ಶಿಕ್ಷೆ ವಿಧಿಸಲು ಸರಕಾರ ಮುಂದಾಗಿದೆ. ಈಗಾಗಲೇ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಪತ್ರಕರ್ತನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಕೇಂದ್ರ ಚೀನಾ ಪಟ್ಟಣದಲ್ಲಿನ ಕೋವಿಡ್-19 ಪ್ರಕರಣಗಳ ಬಗ್ಗೆ ವರದಿ ಮಾಡುತ್ತಿದ್ದ ಝಂಗ್ ಝಾನ್ ಎಂಬ 37 ವರ್ಷದ ವಕೀಲನನ್ನು ಮೇ ತಿಂಗಳಲ್ಲಿ ಬಂಧಿಸಿ ಶಾಂಘೈಗೆ ಕರೆದೊಯ್ಯಲಾಗಿತ್ತು. ಇಂದು ದೋಷಾರೋಪಣೆ ಪತ್ರವನ್ನು ಬಹಿರಂಗಪಡಿಸಲಾಗಿದ್ದು, ಝಂಗ್ "ಜಗಳ ಹುಟ್ಟಿಸಿ ತೊಂದರೆ ಸೃಷ್ಟಿಸಿದ್ದ" ಎಂದು ಆಪಾದಿಸಲಾಗಿದೆ. ಚೀನಾದಲ್ಲಿ ಹೋರಾಟಗಾರರು ಹಾಗೂ ಪತ್ರಕರ್ತರ ವಿರುದ್ಧ ಇಂಥ ಆರೋಪವನ್ನು ಸಾಮಾನ್ಯವಾಗಿ ಹೊರಿಸಲಾಗುತ್ತದೆ.

ಕೋವಿಡ್-19 ಸಾಂಕ್ರಾಮಿಕದ ಕೇಂದ್ರಬಿಂದು ಎನಿಸಿದ ವುಹಾನ್‌ನಲ್ಲಿ ವಾಸ್ತವ ಸ್ಥಿತಿ ಬಗ್ಗೆ ವರದಿ ಮಾಡಲು ಶಾಂಘೈನಿಂದ ವುಹಾನ್‌ಗೆ ತೆರಳಿದ್ದಾಗಿ ಝಂಗ್ ಹೇಳಿದ್ದರು.

"ಸ್ವತಂತ್ರ ಪತ್ರಕರ್ತರ ಬಂಧನ, ಸಂತ್ರಸ್ತರ ಕುಟುಂಬಗಳಿಗೆ ಕಿರುಕುಳದಂಥ ಪ್ರಕರಣಗಳಿಗೆ ಅಧಿಕಾರಿಗಳನ್ನು ಹೊಣೆ ಮಾಡಬೇಕು ಎಂದು ಆಕೆ ತನ್ನ ವಿಚಾಟ್, ಟ್ವಿಟ್ಟರ್ ಮತ್ತು ಯು-ಟ್ಯೂಬ್ ಖಾತೆಗಳ ಮೂಲಕ ಅಸಂಖ್ಯಾತ ವರದಿಗಳನ್ನು ಮಾಡಿದ್ದರು" ಎಂದು ಚೀನಾದ ಚೈನೀಸ್ ಹ್ಯೂಮನ್ ರೈಟ್ಸ್ ಡಿಫೆಂಡರ್ಸ್‌ ಪ್ರಕಟನೆಯಲ್ಲಿ ಹೇಳಿದೆ. ಆಕೆಯನ್ನು ಪೊಲೀಸರು ಮೇ 14ರಂದು ಬಂಧಿಸಿದ್ದು, ಮೇ 15ರಂದು ಶಾಂಘೈಗೆ ಕರೆದೊಯ್ದು ಬಂಧನದಲ್ಲಿಡಲಾಗಿತ್ತು ಎಂದು ಸ್ಪಷ್ಟಪಡಿಸಿದೆ.

ಜೂನ್ 9ರಂದು ಆಕೆಯನ್ನು ಅಧಿಕೃತವಾಗಿ ಬಂಧಿಸಲಾಗಿತ್ತು ಸೆಪ್ಟಂಬರ್ 18ರಂದು ದೋಷಾರೋಪಣೆ ಹೊರಿಸಿ, ಪ್ರಕರಣವನ್ನು ಪುಡಾಂಗ್ ನ್ಯೂ ಡಿಸ್ಟ್ರಿಕ್ಟ್ ಕೋರ್ಟ್‌ಗೆ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News