ಬಿಜೆಪಿಗೆ ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ 'ಗುಪ್ಕರ್ ಗ್ಯಾಂಗ್', ಕಾರ್ಗಿಲ್ ನಲ್ಲಿ ಅಧಿಕಾರದಲ್ಲಿ ಪಾಲುದಾರ
ಹೊಸದಿಲ್ಲಿ: ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ರಚಿತವಾಗಿರುವ ಪೀಪಲ್ಸ್ ಅಲಾಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ ವಾಸ್ತವವಾಗಿ ಜಮ್ಮು ಕಾಶ್ಮೀರ ವಿಚಾರಗಳಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಬಯಸುತ್ತಿರುವ ಒಂದು 'ಗ್ಯಾಂಗ್' ಎಂದು ಟೀಕಿಸುತ್ತಿರುವ ಬಿಜೆಪಿ ಈ ಮೈತ್ರಿ ಕೂಟದ ಭಾಗವಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಜತೆಗೆ ಲಡಾಖ್ ಅಟೊನೋಮಸ್ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್, ಕಾರ್ಗಿಲ್‍ನಲ್ಲಿ ಅಧಿಕಾರ ಹಂಚಿಕೊಂಡಿದೆ.
ಲಡಾಖ್ ಕೌನ್ಸಿಲ್‍ನ 26 ಚುನಾಯಿತ ಸದಸ್ಯರ ಪೈಕಿ 10 ಮಂದಿ ನ್ಯಾಷನಲ್ ಕಾನ್ಫರೆನ್ಸ್ ನವರಾಗಿದ್ದರೆ ಎಂಟು ಮಂದಿ ಕಾಂಗ್ರೆಸ್, ಮೂವರು ಬಿಜೆಪಿ ಹಾಗೂ ಐದು ಮಂದಿ ಪಕ್ಷೇತರರಾಗಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತವು 30 ಸದಸ್ಯರ ಲಡಾಖ್ ಕೌನ್ಸಿಲಿಗೆ ನಾಲ್ಕು ಸದಸ್ಯರನ್ನು ನಾಮಕರಣಗೊಳಿಸುತ್ತದೆ.
ನ್ಯಾಷನಲ್ ಕಾನ್ಘರೆನ್ಸ್ ನ ಫಿರೋಝ್ ಖಾನ್ ಅಧ್ಯಕ್ಷತೆಯ ಕೌನ್ಸಿಲ್‍ನಲ್ಲಿ ಕಾರ್ಯಕಾರಿ ಕೌನ್ಸಿಲರುಗಳಾಗಿ ಇರುವ ನಾಲ್ಕು ಮಂದಿಯ ಪೈಕಿ ಬಿಜೆಪಿಯ ಮುಹಮ್ಮದ್ ಅಲಿ ಚಂದನ್ ಕೂಡ ಒಬ್ಬರು. ಅವರ ಬಳಿ ಆರೋಗ್ಯ, ಕಂದಾಯ, ಕೃಷಿ, ಅರಣ್ಯ, ವನ್ಯಜೀವಿ, ಕೈಗಾರಿಕಾ ತರಬೇತಿ ಹಾಗೂ ಮಣ್ಣಿನ ಸಂರಕ್ಷಣೆಯ ಖಾತೆಗಳಿವೆ.
ಕಾರ್ಗಿಲ್ ಕೌನ್ಸಿಲ್ ಚುನಾವಣೆಗೆ 2018ರಲ್ಲಿ ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ಆದರೆ ಯಾವುದೇ ಪಕ್ಷಕ್ಕೆ ಬಹುಮತ ದೊರೆಯದೇ ಇದ್ದುದರಿಂದ ನ್ಯಾಷನಲ್ ಕಾನ್ಫರೆನ್ಸ್ ಆರಂಭದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿತ್ತು. ಆದರೆ 2019 ಲೋಕಸಭಾ ಚುನಾವಣೆ ನಂತರ ಎರಡೂ ಪಕ್ಷಗಳು ದೂರ ಸರಿದ ನಂತರ ನ್ಯಾಷನಲ್ ಕಾನ್ಫರೆನ್ಸ್ ಇಬ್ಬರು ಪಿಡಿಪಿ ಹಾಗೂ ನಾಲ್ಕು ಪಕ್ಷೇತರರ ಜತೆಗೂಡಿತ್ತು. ಆದರೆ ಕೆಲ ತಿಂಗಳುಗಳಲ್ಲಿ ಇಬ್ಬರು ಪಿಡಿಪಿ ಸದಸ್ಯರು ಬಿಜೆಪಿ ಸೇರಿದ್ದರಿಂದ ನ್ಯಾಷನಲ್ ಕಾನ್ಫರೆನ್ಸ್ - ಬಿಜೆಪಿ ಮೈತ್ರಿಕೂಟ ಅಧಿಕಾರ ನಡೆಸುವಂತಾಯಿತು.