×
Ad

ಎಲ್ಲರ ಹೃದಯ ಗೆದ್ದ ಈ ಪೊಲೀಸ್ ಅಧಿಕಾರಿ

Update: 2020-11-19 13:24 IST

ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದ ವೃದ್ದ ಮಹಿಳೆಯೊಬ್ಬರನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ತೆರಳಿದ್ದು, ಈ ಮೂಲಕ ಅವರು ಎಲ್ಲರ ಹೃದಯ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಮಂಗಳವಾರ ಮಿನಿ ಟ್ರಕ್‌ವೊಂದು ಉರುಳಿಬಿದ್ದ ಪರಿಣಾಮ ಸುಮಾರು 35 ಮಂದಿ ಕಾರ್ಮಿಕರು ಗಾಯಗೊಂಡಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ತಲುಪಿದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಯ ಒಳಗೆ ಸಾಗಿಸಲು ಸ್ಟ್ರಚರ್ ಇಲ್ಲದಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಆಗ ಪೊಲೀಸರು ಸ್ವತಃ ಗಾಯಾಳುಗಳನ್ನು ಆಸ್ಪತ್ರೆಗೆ ಒಳಗೆ ಒಯ್ಯಲು ನಿರ್ಧರಿಸಿದರು. ಸಹಾಯಕ ಸಬ್-ಇನ್‌ಸ್ಪೆಕ್ಟರ್ ಸಂತೋಷ್ ಸೇನ್, ಎಲ್ ಆರ್ ಪಟೇಲ್ ಹಾಗೂ ಕಾನ್‌ಸ್ಟೇಬಲ್‌ಗಳಾದ ಅಶೋಕ್, ರಾಜೇಶ್ ಹಾಗೂ ಅಂಕಿತ್ ಅವರು ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ತಮ್ಮ ಬೆನ್ನಿನ ಮೇಲೆ ಹೊತ್ತುಕೊಂಡು ಆಸ್ಪತ್ರೆಯೊಳಗೆ ತೆರಳಿದರು.

57ರ ವಯಸ್ಸಿನ ಪೊಲೀಸ್ ಅಧಿಕಾರಿ ಸಂತೋಷ್ ಸೇನ್ ಗಾಯಗೊಂಡಿರುವ ವೃದ್ಧ ಮಹಿಳೆಯನ್ನು ತನ್ನ ಬೆನ್ನಮೇಲೆ ಹೊತ್ತುಕೊಂಡು ಆಸ್ಪತ್ರೆ ಒಳಗೆ ಹೋಗುತ್ತಿರುವ ವೀಡಿಯೊ ವೈರಲ್ ಆಗಿದೆ.

ಸಂತೋಷ್ ಸೇನ್‌ಗೆ 14 ವರ್ಷಗಳ ಹಿಂದೆ ನರಸಿಂಗ್ ಪುರ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ನಾಪತ್ತೆಯಾಗಿದ್ದ ಕ್ರಿಮಿನಲ್‌ಗಳೊಂದಿಗೆ ಶೂಟೌಟ್ ನಡೆಸಿದ್ದಾಗ ಬಲಭುಜಕ್ಕೆ ಗಾಯವಾಗಿತ್ತು. 2006ರ ಶೂಟೌಟ್ ಘಟನೆಯ ಬಳಿಕ ಸಂತೋಷ್ ಅವರಿಗೆ ಬಲ ಗೈ ಸಮಸ್ಯೆ ಕಾಣಿಸಿಕೊಂಡಿದೆ. ಬಲಗೈಯಲ್ಲಿ ಸಮಸ್ಯೆ ಎದುರಿಸುತ್ತಿದ್ದರೂ ವೃದ್ದೆಯನ್ನು ತನ್ನ ಬೆನ್ನ ಮೇಲೆ ಎತ್ತಿಕೊಂಡು ತೆರಳಿರುವ ಸಂತೋಷ್ ಅವರ ಪ್ರಯತ್ನಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News