ನೆರೆ ಪರಿಹಾರ ನೆರವು ಪಡೆಯಲು ಸರದಿ ಸಾಲಲ್ಲಿ ನಿಂತಿದ್ದ ಮಹಿಳೆ ಕುಸಿದು ಬಿದ್ದು ಮೃತ್ಯು
Update: 2020-11-19 15:32 IST
ಹೈದರಾಬಾದ್: ಪ್ರವಾಹ ಪರಿಹಾರದ ಭಾಗವಾಗಿ ಸರಕಾರ ಘೋಷಿಸಿರುವ ಆರ್ಥಿಕ ಸಹಾಯ ಪಡೆಯಲು ಅರ್ಜಿ ಸಲ್ಲಿಕೆಗೆ ಹೈದರಾಬಾದ್‌ನ ಮೀ ಸೇವಾ ನಾಗರಿಕ ಕೇಂದ್ರದ ಹೊರಗೆ ಸರದಿಸಾಲಲ್ಲಿ ನಿಂತಿದ್ದ 55 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಸಿದುಬಿದ್ದಿದ್ದ ಮಹಿಳೆಯನ್ನು ಆಕೆಯ ಸಂಬಂಧಿಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಮಹಿಳೆಯು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಮಹಿಳೆಯ ಸಂಬಂಧಿ ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಮೀ ಸೇವಾ ಕೇಂದ್ರದ ಹೊರಗೆ ದೊಡ್ಡ ಸರತಿ ಸಾಲು ಕಂಡುಬರುತ್ತಿದೆ. ತೆಲಂಗಾಣ ಸರಕಾರವು ಪ್ರವಾಹ ಪೀಡಿತ ಕುಟುಂಬಗಳಿಗೆ ಘೋಷಿಸಿರುವ 10,000 ರೂ. ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ನೂರಾರು ಜನರು ಜಮಾಯಿಸಿದ್ದರು.