ಜೆಎನ್‍ಯು ಹಿಂಸಾಚಾರ: ತಮಗೆ ತಾವೇ ಕ್ಲೀನ್ ಚಿಟ್ ಕೊಡಿಸಿದ ದಿಲ್ಲಿ ಪೊಲೀಸರು
ಹೊಸದಿಲ್ಲಿ: ಜನವರಿ 5ರಂದು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಾಗೂ 'ಸ್ಥಳೀಯ ಪೊಲೀಸರ ನಿರ್ಲಕ್ಷ್ಯ' ಆರೋಪ ಕುರಿತಂತೆ ದಿಲ್ಲಿ ಪೊಲೀಸರು ತಾವೇ ರಚಿಸಿದ್ದ ಸತ್ಯಶೋಧನಾ ಸಮಿತಿಯ ಮುಖಾಂತರ ಕ್ಲೀನ್ ಚಿಟ್ ಗಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಜೆಎನ್‍ಯು ಕ್ಯಾಂಪಸ್ಸಿಗೆ ಜನವರಿ 5ರಂದು ನುಗ್ಗಿದ್ದ 100 ಮಂದಿ ಮುಸುಕುಧಾರಿ ದುಷ್ಕರ್ಮಿಗಳು ದಾಂಧಲೆಗೈದಿದ್ದೇ ಅಲ್ಲದೆ ಕೋಲು ಹಾಗೂ ರಾಡ್‍ಗಳಿಂದ ಹಲ್ಲೆ ನಡೆಸಿದ ಪರಿಣಾಮವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಸೇರಿದಂತೆ 36 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿ ತನಿಖೆಯನ್ನು ಕ್ರೈಂ ಬ್ರ್ಯಾಂಚ್‍ಗೆ ಹಸ್ತಾಂತರಿಸಲಾಗಿದ್ದರೂ ಇನ್ನೂ ಯಾರನ್ನು ಬಂಧಿಸಲಾಗಿಲ್ಲ.
ಕ್ಯಾಂಪಸ್‍ನೊಳಗೆ ಹಿಂಸಾಚಾರ ನಡೆಯುತ್ತಿದ್ದರೂ ಪೊಲೀಸರು ಕ್ಯಾಂಪಸ್ ಒಳಗೆ ಪ್ರವೇಶಿಸಿ ಹಿಂಸೆಯನ್ನು ನಿಯಂತ್ರಿಸುವ ಬದಲು ಹೊರಗೆ ಏಕೆ ನಿಂತಿದ್ದರೆಂಬ ಕುರಿತಂತೆ ಹಲವಾರು ಪ್ರಶ್ನೆಗಳು ಆ ಸಂದರ್ಭ ಎದ್ದಿದ್ದವು. ವಿವಿ ಆಡಳಿತದ ಅನುಮತಿಯಿಲ್ಲದೆ ತಾವು ಕ್ಯಾಂಪಸ್‍ನೊಳಗೆ ಪ್ರವೇಶಿಸುವಂತಿರಲಿಲ್ಲವೆಂದು ಪೊಲೀಸರು ನಂತರ ಸ್ಪಷ್ಟನೆ ನೀಡಿದ್ದರು. ಆಗಿನ ಪೊಲೀಸ್ ಆಯುಕ್ತರಾಗಿದ್ದ ಅಮೂಲ್ಯ ಪಟ್ನಾಯಕ್ ಅವರ ಸೂಚನೆಯಂತೆ ಪಶ್ಚಿಮ ವಲಯ ಜಂಟಿ ಪೊಲೀಸ್ ಆಯುಕ್ತೆ ಶಾಲಿನಿ ಸಿಂಗ್ ನೇತೃತ್ವದಲ್ಲಿ ನಾಲ್ಕು ಇನ್‍ಸ್ಪೆಕ್ಟರ್ ಗಳು ಹಾಗೂ ಇಬ್ಬರು ಎಸಿಪಿಗಳಿರುವ ಸತ್ಯಶೋಧನಾ ಸಮಿತಿಯನ್ನೂ ರಚಿಸಲಾಗಿತ್ತು.
ತನಿಖೆಯ ಭಾಗವಾಗಿ ಸಮಿತಿಯು ಘಟನೆ ನಡೆದ ದಿನ ವಿವಿಯ ಆಡಳಿತ ಕಟ್ಟಡದ ಹೊರಗೆ ಹೈಕೋರ್ಟ್ ಸೂಚನೆಯಂತೆ ನಿಯೋಜನೆಗೊಂಡಿದ್ದ ಆಗಿನ ನೈಋತ್ಯ ಡಿಸಿಪಿ ದೇವೇಂದರ್ ಆರ್ಯ, ಆಗಿನ ಎಸಿಪಿ ರಮೇಶ್ ಕಕ್ಕರ್, ವಸಂತ್ ಕುಂಜ್ ಠಾಣಾಧಿಕಾರಿ ರಿತುರಾಜ್ ಹಾಗೂ ಇನ್‍ಸ್ಪೆಕ್ಟರ್ ಆನಂದ್ ಯಾದವ್ ಅವರನ್ನು ವಿಚಾರಣೆಗೊಳಪಡಿಸಿತ್ತು. ಆದರೆ ಆ ದಿನದ ಘಟನಾವಳಿಗಳ ಕುರಿತಂತೆ ಎಲ್ಲರೂ ಒಂದೇ ರೀತಿಯ ಉತ್ತರ ನೀಡಿದ್ದರೆನ್ನಲಾಗಿದೆ.
ಪೆರಿಯಾರ್ ಹಾಸ್ಟೆಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಸಹಿತ ಇತರ ಘಟನೆಗಳಿಗೆ ಸಂಬಂಧಿಸಿದಂತೆ 3.45ರಿಂದ 4.15ರ ನಡುವೆ ಎಂಟು ಪಿಸಿಆರ್ ಕರೆಗಳು ಹೋಗಿದ್ದವು ಹಾಗೂ ಜಗಳ ಹಾಗೂ ವಿದ್ಯಾರ್ಥಿಗಳ ಗುಂಪುಗೂಡುವಿಕೆ ಕುರಿತಂತೆ ನಂತರ 14 ಪಿಸಿಆರ್ ಕರೆಗಳು ಹೋಗಿದ್ದವು ಎಂದೂ ಸಮಿತಿಯ ವರದಿಯಲ್ಲಿ ಹೇಳಲಾಗಿದೆ.
ಉಪಕುಲಪತಿ ಜಗದೀಶ್ ಕುಮಾರ್ ಅವರು ವಿವಿ ಹೊರಗೆ ನಿಯೋಜಿಸಲ್ಪಟ್ಟಿದ್ದ ಪೊಲೀಸರಿಗೆ ಗೇಟಿನಲ್ಲಿಯೇ ಇರುವಂತೆ ಸಂಜೆ 6.24ಕ್ಕೆ ಕಳುಹಿಸಿದ್ದ ವಾಟ್ಸ್ಯಾಪ್ ಸಂದೇಶ ಹಾಗೂ ನಂತರ ಸಂಜೆ 7.45ಕ್ಕೆ ಕುಲಪತಿ ಪ್ರಮೋದ್ ಕುಮಾರ್ ಅವರು ವಿವಿ ಆವರಣದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸುವಂತೆ ಪೊಲೀಸರಿಗೆ ನೀಡಿದ ಅಧಿಕೃತ ಪತ್ರವನ್ನು ಸಮಿತಿಗೆ ತೋರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಂಪಸ್‍ನಲ್ಲಿ ಆ ದಿನ ಬೆಳಗ್ಗಿನಿಂದಲೇ ಉದ್ವಿಗ್ನತೆಯಿತ್ತು ಹಾಗೂ ಪೊಲೀಸರ ಮಧ್ಯಪ್ರವೇಶದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು ಎಂದು ಸತ್ಯ ಶೋಧನಾ ಸಮಿತಿ ಹೇಳಿದೆ.