ಪ್ರಮಾಣವಚನ ಸ್ವೀಕರಿಸಿದ ಮೂರೇ ದಿನಗಳಲ್ಲಿ ಬಿಹಾರ ಶಿಕ್ಷಣ ಸಚಿವರ ರಾಜೀನಾಮೆ

Update: 2020-11-19 14:52 GMT
ಮೇವಾಲಾಲ್ ಚೌಧುರಿ (Twitter)

ಪಾಟ್ನಾ,ನ.19: ಮೂರು ದಿನಗಳ ಹಿಂದಷ್ಟೇ ಅಧಿಕಾರ ಸ್ವೀಕರಿಸಿದ್ದ ಬಿಹಾರದ ನಿತೀಶ್ ಕುಮಾರ್ ಸಂಪುಟದ ಮೊದಲ ವಿಕೆಟ್ ಪತನಗೊಂಡಿದೆ. ಸೋಮವಾರವಷ್ಟೇ ಸರಕಾರದಲ್ಲಿ ಶಿಕ್ಷಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಮೇವಾಲಾಲ ಚೌಧರಿ ಗುರುವಾರ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಚೌಧರಿ ನೇಮಕವನ್ನು ತೀಕ್ಷ್ಣವಾಗಿ ಟೀಕಿಸಿದ್ದ ರಾಜ್ಯದಲ್ಲಿಯ ಪ್ರತಿಪಕ್ಷಗಳು,ವಂಚನೆ ಮತ್ತು ಕ್ರಿಮಿನಲ್ ಒಳಸಂಚು ಸೇರಿದಂತೆ ಚೌಧರಿ ವಿರುದ್ಧ ಹಲವಾರು ಆರೋಪಗಳಿದ್ದರೂ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಗಿದೆ ಎಂದು ಬೆಟ್ಟು ಮಾಡಿದ್ದವು.

ಚೌಧರಿ (67) ಭಾಗಲ್ಪುರ ಜಿಲ್ಲೆಯ ಸಬೌರ್‌ನ ಬಿಹಾರ ಕೃಷಿ ವಿವಿಯ ಕುಲಪತಿಯಾಗಿದ್ದ ಅವಧಿಯಲ್ಲಿ ನೇಮಕಾತಿಗಳಲ್ಲಿ ಅಕ್ರಮಗಳನ್ನು ನಡೆಸಿದ್ದ ಆರೋಪದಲ್ಲಿ 2017ರಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ಜೆಡಿಯು ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. 2015ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ಯೋಗವನ್ನು ತೊರೆದಿದ್ದ ಚೌಧರಿ ಮುಂಗೇರ್ ಜಿಲ್ಲೆಯ ತಾರಾಪುರ ಕ್ಷೇತ್ರದಿಂದ ಜೆಡಿಯು ಟಿಕೆಟ್‌ನಲ್ಲಿ ಗೆದ್ದಿದ್ದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಪುನರಾಯ್ಕೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News