"ನಿಮ್ಮನ್ನು ಮಂಪರಿನಿಂದ ಎಬ್ಬಿಸಲು ನಾವಿಲ್ಲಿ ಕುಳಿತಿಲ್ಲ": ಕೇಜ್ರಿವಾಲ್ ಸರಕಾರಕ್ಕೆ ಹೈಕೋರ್ಟ್ ತರಾಟೆ

Update: 2020-11-19 11:50 GMT

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಅಲ್ಲಿನ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರಕಾರವನ್ನು ಗುರುವಾರ ದಿಲ್ಲಿ  ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. "ನವೆಂಬರ್ 1ರಿಂದಲೇ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದರೂ ಮದುವೆ ಸಮಾರಂಭಗಳಲ್ಲಿ  ಭಾಗವಹಿಸುವ ಅತಿಥಿಗಳ ಸಂಖ್ಯೆಗೆ ಮಿತಿ ಹೇರಲು 18 ದಿನಗಳ ಕಾಲ ಏಕೆ ಕಾದಿರಿ? ಈ ಅವಧಿಯಲ್ಲಿ ಎಷ್ಟೊಂದು ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ,'' ಎಂದು ಹೈಕೋರ್ಟ್ ಹೇಳಿದೆ. "ನಿಮ್ಮನ್ನು ನಿದ್ದೆಯಿಂದ ಬಡಿದೆಬ್ಬಿಸಲಾಗಿದೆ, ನಾವು ಪ್ರಶ್ನೆಗಳನ್ನು ಕೇಳಿದ ನಂತರ ನೀವು ಮಗುಚಿ ಬಿದ್ದಿರಿ,'' ಎಂದು ನ್ಯಾಯಾಲಯ ಹೇಳಿದೆ.

"ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ನೋಡಿ ಸುಮ್ಮನಿರಲು ನಮಗೆ ಸಾಧ್ಯವಿಲ್ಲ. ನೀವು ನವೆಂಬರ್ 1ರಿಂದ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡಿಲ್ಲ, ಆದುದರಿಂದ ನಮಗೆ ಚಿಂತೆಯಾಗಿದೆ. ನಿಮ್ಮನ್ನು ಮಂಪರಿನಿಂದ ಎಬ್ಬಿಸಲು ನಾವಿಲ್ಲಿ ಕುಳಿತಿಲ್ಲ,'' ಎಂದು ಹೇಳಿತು.

ಮಾಸ್ಕ್ ಧರಿಸದೇ ಇರುವುದಕ್ಕೆ ಹಾಗೂ ಸಾಮಾಜಿಕ ಅಂತರ ಕಾಪಾಡದೇ ಇರುವ ತಪ್ಪಿಗೆ ವಿಧಿಸಲಾಗಿರುವ ದಂಡ ಮೊತ್ತ ಕೂಡ ಕೋವಿಡ್ ನಿಯಂತ್ರಿಸಲು ಸಹಕಾರಿಯಾಗಿಲ್ಲ. ಇತರರ ನಿರ್ಲಕ್ಷ್ಯದಿಂದ ಮನೆಗಳಿಂದ ಹೊರಗೆ ಕಾಲಿಡುವವರು ಅಪಾಯ ಎದುರಿಸುತ್ತಿದ್ದಾರೆ.'' ಎಂದು ನ್ಯಾಯಾಲಯ ಹೇಳಿದೆ.

"ನೀವೊಬ್ಬರೇ ಜವಾಬ್ದಾರರು ಎಂದು ನಾವು ಹೇಳುವುದಿಲ್ಲ, ನಾಗರಿಕರೂ ಜವಾಬ್ದಾರರು. ಅವರು ಬೇಜವಾಬ್ದಾರಿ ತೋರಿದರೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ನಿಮ್ಮ ಕರ್ತವ್ಯ,'' ಎಂದು ನ್ಯಾಯಾಲಯ ಹೇಳಿದೆ.

ಮದುವೆಗಳಿಗೆ ಆಗಮಿಸುವ ಅತಿಥಿಗಳ ಸಂಖ್ಯೆಯನ್ನು 200ಕ್ಕೆ ಏರಿಸಿ ಸರಕಾರ ನ.1ರಂದು ಕೈಗೊಂಡ ಕ್ರಮವನ್ನು ಕಳೆದ ವಾರ ನ್ಯಾಯಾಲಯ ಪ್ರಶ್ನಿಸಿತ್ತಲ್ಲದೆ ಕೋವಿಡ್ ನಿಯಂತ್ರಣಕ್ಕೆ ಕಳೆದೆರಡು ವಾರಗಳಲ್ಲಿ ಕೈಗೊಂಡ ಕ್ರಮಗಳ ಕುರಿತು ಸ್ಥಿತಿಗತಿ ವರದಿಯನ್ನು ನ. 18 ಅಥವಾ ಅದಕ್ಕೆ ಮುಂಚಿತವಾಗಿ ಸಲ್ಲಿಸುವಂತೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News