×
Ad

ಎಪ್ರಿಲ್ 2021ರಿಂದ ರಕ್ಷಣಾ ಪಡೆಗಳ ಅಧಿಕಾರಿಗಳ ನಿವೃತ್ತಿ ವಯಸ್ಸು ಹೆಚ್ಚಳ

Update: 2020-11-19 20:18 IST

ಹೊಸದಿಲ್ಲಿ,ನ.19: ರಕ್ಷಣಾ ಪಡೆಗಳ ಎಲ್ಲ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು ಒಂದರಿಂದ ಮೂರು ವರ್ಷ ಹೆಚ್ಚಿಸುವ ಪ್ರಸ್ತಾವವನ್ನು ಎಪ್ರಿಲ್ 2021ರಿಂದ ಜಾರಿಗೊಳಿಸಲು ಮಿಲಿಟರಿ ವ್ಯವಹಾರಗಳ ಇಲಾಖೆ(ಡಿಎಂಎ)ಯು ಯೋಜಿಸಿದೆ.

ಸೇನೆ ಮತ್ತು ನೌಕಾಪಡೆಗಳಲ್ಲಿಯ ಕರ್ನಲ್‌ಗಳು, ಬ್ರಿಗೇಡಿಯರ್‌ಗಳು ಮತ್ತು ಮೇಜರ್ ಜನರಲ್ ದರ್ಜೆಯ ಅಧಿಕಾರಿಗಳು ಮತ್ತು ಅವರ ಸಮಾನ ಹುದ್ದೆಗಳಲ್ಲಿರುವವರ ನಿವೃತ್ತಿ ವಯಸ್ಸನ್ನು ಒಂದರಿಂದ ಮೂರು ವರ್ಷಗಳ ಅವಧಿಗೆ ವಿಸ್ತರಿಸಲಾಗುವುದು ಎಂದು ಉನ್ನತ ಸರಕಾರಿ ಮೂಲಗಳು ತಿಳಿಸಿವೆ. ಸಶಸ್ತ್ರಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ನೇತೃತ್ವದ ಡಿಎಂಎ ನೂತನ ನಿಯಮಗಳನ್ನು ಮುಂದಿನ ವರ್ಷದ ಎ.1ರಿಂದ ಜಾರಿಗೆ ತರಲು ಉದ್ದೇಶಿಸಿದೆ. ಅತ್ಯಂತ ಅನುಭವಿ ಮತ್ತು ನುರಿತ ಅಧಿಕಾರಿಗಳನ್ನು ರಕ್ಷಣಾ ಪಡೆಗಳಲ್ಲಿ ಉಳಿಸಿಕೊಳ್ಳುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಅವು ತಿಳಿಸಿವೆ.

ಉದ್ದೇಶಿತ ಪ್ರಸ್ತಾವದಂತೆ ಕರ್ನಲ್‌ಗಳು ಮತ್ತು ವಾಯುಪಡೆ ಹಾಗೂ ನೌಕಾಪಡೆಗಳಲ್ಲಿಯ ಸಮಾನ ದರ್ಜೆಯ ಅಧಿಕಾರಿಗಳು ಈಗಿನ 54 ವರ್ಷಗಳಿಂದ 57 ವರ್ಷಗಳಿಗೆ, ಬ್ರಿಗೇಡಿಯರ್‌ಗಳು ಮತ್ತು ಸಮಾನ ದರ್ಜೆಯ ಅಧಿಕಾರಿಗಳು ಈಗಿನ 56 ವರ್ಷಗಳಿಂದ 58 ವರ್ಷಗಳಿಗೆ ಹಾಗೂ ಮೇಜರ್ ಜನರಲ್ ದರ್ಜೆಯ ಅಧಿಕಾರಿಗಳು ಈಗಿನ 58 ವರ್ಷಗಳಿಂದ 59 ವರ್ಷ ವಯಸ್ಸಿಗೆ ನಿವೃತ್ತರಾಗಲಿದ್ದಾರೆ.

ಲೆಫ್ಟಿನೆಂಟ್ ಜನರಲ್‌ಗಳ ನಿವೃತ್ತಿ ವಯಸ್ಸಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಅವರು ಎಂದಿನಂತೆ 60 ವರ್ಷಕ್ಕೆ ನಿವೃತ್ತರಾಗಲಿದ್ದಾರೆ.

ಲಾಜಿಸ್ಟಿಕ್ಸ್, ತಾಂತ್ರಿಕ ಮತ್ತು ವೈದ್ಯಕೀಯ ವಿಭಾಗಗಳಲ್ಲಿಯ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು ಯೋಧರ ನಿವೃತ್ತಿ ವಯಸ್ಸೂ 57 ವರ್ಷಗಳಿಗೆ ಹೆಚ್ಚಲಿದೆ. ಭಾರತೀಯ ಸೇನೆಯ ಇಎಂಇ,ಎಎಸ್‌ಸಿ ಮತ್ತು ಎಒಸಿ ವಿಭಾಗಗಳೂ ಇದರಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News