ಆರೋಗ್ಯ ಕ್ಷೇತ್ರದಲ್ಲಿ ಭಾರತದ ಒಟ್ಟು ವೆಚ್ಚ ಅತ್ಯಂತ ಕಡಿಮೆ: ನೀತಿ ಆಯೋಗದ ಸದಸ್ಯ

Update: 2020-11-19 16:25 GMT
ವಿ.ಕೆ. ಪೌಲ್

ಹೊಸದಿಲ್ಲಿ, ನ. 19: ಆರೋಗ್ಯ ಕ್ಷೇತ್ರದಲ್ಲಿ ಭಾರತದ ಒಟ್ಟು ವೆಚ್ಚ ಅತ್ಯಂತ ಕಡಿಮೆ. ಈ ಪರಿಸ್ಥಿತಿ ಸರಿಪಡಿಸಬೇಕು ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ. ಪೌಲ್ ಗುರುವಾರ ಹೇಳಿದ್ದಾರೆ.

ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚ ಹೆಚ್ಚಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಮನವಿ ಮಾಡಬೇಕಾದ ಅಗತ್ಯತೆ ಇದೆ ಎಂದು ಒತ್ತಿ ಹೇಳಿದ ಅವರು, ಕೊರೋನ ರೋಗದ ಅನುಭವ ಆರೋಗ್ಯ ವಲಯದಲ್ಲಿ ವೆಚ್ಚ ಏರಿಕೆ ಮಾಡಬೇಕೆಂಬ ನಿಲುವನ್ನು ಸಮರ್ಥಿಸುತ್ತದೆ ಎಂದರು. ‘‘ಆರೋಗ್ಯ ಕ್ಷೇತ್ರದಲ್ಲಿ ಭಾರತದ ಒಟ್ಟು ವೆಚ್ಚ ತುಂಬಾ ಕಡಿಮೆ. ಇದನ್ನು ಸರಿಪಡಿಸಬೇಕಾದ ಅಗತ್ಯದೆ ಇದೆ ’’ ಎಂದು ಕೈಗಾರಿಕಾ ಸಂಸ್ಥೆ ಸಿಐಐ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹೇಳಿದರು.

2018-19ರಲ್ಲಿ ಭಾರತ ಆರೋಗ್ಯ ಕ್ಷೇತ್ರದಲ್ಲಿ ಜಿಡಿಪಿಯ ಶೇ. 1.5ರಷ್ಟನ್ನು ವೆಚ್ಚ ಮಾಡಿದೆ. ಇದು ಕಳೆದ ದಶಕಗಳಲ್ಲೇ ಸ್ಪಲ್ಪ ಸುಧಾರಣೆ ಎಂದಷ್ಟೇ ಹೇಳಬಹುದು ಎಂದು ಪೌಲ್ ಹೇಳಿದರು. ‘‘ಭಾರತ ಜಿಡಿಪಿಯ ಶೇ. 1.5ನ್ನು ಆರೋಗ್ಯ ವಲಯದಲ್ಲಿ ವೆಚ್ಚ ಮಾಡುತ್ತಿರುವುದು ಖಂಡಿತವಾಗಿ ಸ್ವೀಕಾರಾರ್ಹವಲ್ಲ. ಯುರೋಪ್‌ನ ದೇಶಗಳು ಜಿಡಿಪಿಯ ಶೇ. 7ರಿಂದ 8ನ್ನು ಆರೋಗ್ಯ ಕ್ಷೇತ್ರದ ಮೇಲೆ ವೆಚ್ಚ ಮಾಡುತ್ತವೆ’’ ಎಂದು ಅವರು ತಿಳಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ನ ದಾಖಲೆಯನ್ನು ಉಲ್ಲೇಖಿಸಿದ ಪೌಲ್, ಆರೋಗ್ಯ ಕ್ಷೇತ್ರದ ಮೇಲೆ ಭಾರತದ ವೆಚ್ಚ 2025ರಲ್ಲಿ ಶೇ. 3 ಏರಿಕೆಯಾಗಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News