ಕೋವ್ಯಾಕ್ಸಿನ್‌ನ ಪರೀಕ್ಷಾರ್ಥ ಡೋಸ್ ಪಡೆಯಲಿರುವ ಹರ್ಯಾಣದ ಸಚಿವ ವಿಝ್

Update: 2020-11-19 17:09 GMT

ಹೊಸದಿಲ್ಲಿ,ನ.19: ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ,ಭಾರತ ಬಯೊಟೆಕ್ ಅಭಿವೃದ್ಧಿಗೊಳಿಸಿರುವ ಕೋವ್ಯಾಕ್ಸಿನ್‌ನ ಪರೀಕ್ಷಾರ್ಥ ಡೋಸ್ ಪಡೆಯಲು ತಾನು ಸ್ವಯಂಇಚ್ಛೆಯಿಂದ ನಿರ್ಧರಿಸಿರುವುದಾಗಿ ಹರ್ಯಾಣದ ಗೃಹ ಸಚಿವ ಅನಿಲ ವಿಝ್ ಅವರು ತಿಳಿಸಿದ್ದಾರೆ. ಅವರು ಶುಕ್ರವಾರ ಪೂರ್ವಾಹ್ನ ಅಂಬಾಲಾ ಕ್ಯಾಂಟೋನ್ಮೆಂಟ್‌ನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಉಸ್ತುವಾರಿಯಡಿ ಲಸಿಕೆಯ ಪರೀಕ್ಷಾರ್ಥ ಡೋಸ್ ಅನ್ನು ತೆಗೆದುಕೊಳ್ಳಲಿದ್ದಾರೆ.

ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆಗಳನ್ನೂ ನೋಡಿಕೊಳ್ಳುತ್ತಿರುವ ವಿಝ್ ಗುರುವಾರ ಟ್ವಿಟ್ಟರ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಕೋವ್ಯಾಕ್ಸಿನ್ ಪರೀಕ್ಷಾರ್ಥ ಪ್ರಯೋಗದ ಮೂರನೇ ಹಂತದಲ್ಲಿದೆ. ಈ ಹಂತದಲ್ಲಿ ದೇಶಾದ್ಯಂತ 26,000 ಸ್ವಯಂಸೇವಕರು ಲಸಿಕೆಯನ್ನು ಪಡೆಯಲಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಎರಡು ಮತ್ತು ಮೂರನೇ ಹಂತಗಳಲ್ಲಿ ಸುಮಾರು 1,000 ಜನರಿಗೆ ಕೋವ್ಯಾಕ್ಸಿನ್ ನೀಡಲಾಗಿದ್ದು,ಭರವಸೆದಾಯಕ ಫಲಿತಾಂಶಗಳು ಲಭ್ಯವಾಗಿದ್ದವು.

ಅಭಿವೃದ್ಧಿಗೊಳ್ಳುತ್ತಿರುವ ಇತರ ಕೊರೋನ ವೈರಸ್ ಲಸಿಕೆಗಳ ಪೈಕಿ ಸೀರಮ್ ಇನ್‌ಸ್ಟಿಟ್ಯೂಟ್‌ನ ಆಕ್ಸ್‌ಫರ್ಡ್ ಲಸಿಕೆಯ ಮೂರನೇ ಹಂತದ ಪರೀಕ್ಷಾರ್ಥ ಪ್ರಯೋಗ ಶೀಘ್ರವೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಡಾ.ರೆಡ್ಡೀಸ್ ಲ್ಯಾಬ್ ಕೂಡ ರಷ್ಯದ ಕೋವಿಡ್ ಲಸಿಕೆ ಸ್ಫುಟ್ನಿಕ್ ರ ಎರಡು ಮತ್ತು ಮೂರನೇ ಹಂತದ ಜಂಟಿ ಕ್ಲಿನಿಕಲ್ ಪ್ರಯೋಗಗಳನ್ನು ಶೀಘ್ರವೇ ಆರಂಭಿಸಲಿದೆ. ಬಯಾಲಾಜಿಕಲ್ ಇ ಲಿ.ಸಹ ತನ್ನ ಲಸಿಕೆಯ ಒಂದು ಮತ್ತು ಎರಡನೇ ಪರೀಕ್ಷಾರ್ಥ ಪ್ರಯೋಗಗಳನ್ನು ಆರಂಭಿಸಿದೆ.

ತನ್ಮಧ್ಯೆ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 45,576 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು,ಒಟ್ಟು ಪ್ರಕರಣಗಳ ಸಂಖ್ಯೆ 90 ಲಕ್ಷದ ಸಮೀಪಕ್ಕೆ ತಲುಪಿದೆ. 585 ಜನರು ಮೃತಪಟ್ಟಿದ್ದು,ಒಟ್ಟು ಸಾವುಗಳ ಸಂಖ್ಯೆ 1,31,578ಕ್ಕೇರಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 4,43,303ಕ್ಕಿಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News