×
Ad

ಜೆಎನ್‍ಯುವಿಗೆ ಸ್ವಾಮಿ ವಿವೇಕಾನಂದರ ಹೆಸರಿಡಬೇಕೆಂದ ಬಿಜೆಪಿ ನಾಯಕರಿಗೆ ಎಬಿವಿಪಿ ಬೆಂಬಲವಿಲ್ಲ

Update: 2020-11-20 11:47 IST

ಹೊಸದಿಲ್ಲಿ: ರಾಜಧಾನಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರದ ಬೆಳವಣಿಗೆಯಲ್ಲಿ  ಜೆಎನ್‍ಯುವಿಗೆ ಸ್ವಾಮಿ ವಿವೇಕಾನಂದರ ಹೆಸರಿಡಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಲಹೆ ನೀಡಿದ್ದರು. ರವಿ ಹೊರತಾಗಿ ಬಿಜೆಪಿಯ ಇತರ ನಾಯಕರುಗಳಾದ ತಜೀಂದರ್ ಪಾಲ್ ಸಿಂಗ್ ಬಗ್ಗಾ, ಅಪರಾಜಿತಾ ಸಾರಂಗಿ, ಮನೋಜ್ ತಿವಾರಿ ಕೂಡ ಜೆಎನ್‍ಯುವಿನ ಮರುನಾಮಕರಣಕ್ಕೆ ಆಗ್ರಹಿಸಿದ್ದರು.

ಆದರೆ ಈ ಆಗ್ರಹ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‍ನ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಜೆಎನ್‍ಯುವಿನ ಎಬಿವಿಪಿ ಘಟಕದ ಅಧ್ಯಕ್ಷ ಶಿವಂ ಚೌರಾಸಿಯಾ,  ತಮ್ಮ ಸಂಘಟನೆ ಕ್ಯಾಂಪಸ್‍ನಲ್ಲಿ ಸ್ವಾಮಿ ವಿವೇಕಾನಂದ ಅವರ ಪ್ರತಿಮೆ ಸ್ಥಾಪನೆಗೆ ಬಹಳಷ್ಟು ಶ್ರಮಿಸಿತ್ತು ಎಂದಿದ್ದಾರೆ. "ಹೆಸರಿನಲ್ಲೇನಿದೆ? ವಿಶ್ವವಿದ್ಯಾಲಯದ ಹೆಸರು ಬದಲಿಸುವ ಬದಲು ಸ್ವಾಮಿ ವಿವೇಕಾನಂದರ ಸಂದೇಶವನ್ನು ಪಸರಿಸುವ ಅಗತ್ಯವಿದೆ,'' ಎಂದಿದ್ದಾರೆ.

"ನಾವು ಯಾವುದೇ ರೀತಿಯ ಬದಲಾವಣೆಗಳ ಪರ ಇಲ್ಲ. ವಿವೇಕಾನಂದರ ಪ್ರತಿಮೆ ಜೆಎನ್‍ಯು ವಿದ್ಯಾರ್ಥಿ ಸಮುದಾಯಕ್ಕೆ ಒಂದು ಗೌರವ. ವಿವೇಕಾನಂದ ಅವರ ಸಂದೇಶಗಳು ಹಾಗೂ ಚಿಂತನೆಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಉದ್ದೇಶ,'' ಎಂದು ಜೆಎನ್‍ಯು ಎಬಿವಿಪಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜೆಎನ್‍ಯುವಿನ ಎಬಿವಿಪಿ ಘಟಕದ ಅಧ್ಯಕ್ಷ ಚೌರಾಸಿಯಾ ಅವರು ಜವಾರಲಾಲ್ ನೆಹರೂ ಕುರಿತು ಏನನ್ನೂ ಹೇಳದೇ ಇದ್ದರೂ, ಸದಸ್ಯೆ ಕೃತಿಕಾ ಸೇನ್ ಈ ಕುರಿತು ಮಾತನಾಡಿ ಜೆಎನ್‍ಯು ಈ ವಿವಿಗೆ ಅತ್ಯುತ್ತಮ ಹೆಸರು ಎಂದರು. ``ನೆಹರೂ ಮತ್ತು ಸ್ವಾಮಿ ವಿವೇಕಾನಂದ ಇಬ್ಬರೂ ಮಹಾನ್ ವ್ಯಕ್ತಿಗಳು. ವಿವಿಯ ಹೆಸರು ಬದಲಾಯಿಸಿದರೆ ಅದು ನೆಹರೂ ಅವರಿಗೆ ಅಗೌರವ ತೋರಿದಂತೆ,'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News