ಸಿದ್ದೀಕ್ ಕಪ್ಪನ್ ಪ್ರಕರಣ: ಹಿಂದಿನ ಆದೇಶ ಕುರಿತು ಮಾಧ್ಯಮಗಳ ವರದಿಗಾರಿಕೆ ಬಗ್ಗೆ ಸುಪ್ರೀಂ ಅಸಮಾಧಾನ

Update: 2020-11-20 10:00 GMT

ಹೊಸದಿಲ್ಲಿ: ಹತ್ರಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಬಂಧನಕ್ಕೊಳಗಾದ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲಿನ ಕುರಿತು ಮಾಧ್ಯಮಗಳು ವರದಿ ಮಾಡಿದ ಶೈಲಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಾಲಯ ಕಪ್ಪನ್ ಅವರಿಗೆ ಜಾಮೀನು ನಿರಾಕರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿರುವುದು "ನ್ಯಾಯೋಚಿತವಲ್ಲ.'' ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದ್ದಾರೆ. "ನಮ್ಮ ಹಿಂದಿನ ಆದೇಶದ ಕುರಿತಂತೆ ಮಾಧ್ಯಮ ವರದಿಗಳು ನ್ಯಾಯೋಚಿತವಾಗಿರಲಿಲ್ಲ. ನಾವು ನಿಮಗೆ  ಜಾಮೀನು ನಿರಾಕರಿಸಿದ್ದೇವೆ ಎಂದು ಹೇಳಲಾಗಿತ್ತು,'' ಎಂದು ಸಿಜೆಐ ಹೇಳಿದರು.

"ಈ ವರದಿಗಳಲ್ಲಿ ನನ್ನ ಪಾತ್ರವಿಲ್ಲ ಹಾಗೂ ಅನುಚಿತ ವರದಿಗಾರಿಕೆ ಪ್ರತಿ ದಿನ ನಡೆಯುತ್ತಿದೆ,'' ಎಂದು ಈ ಪ್ರಕರಣದಲ್ಲಿ ಕೇರಳ ಕಾರ್ಯನಿರತ ಪತ್ರಕರ್ತರ ಯೂನಿಯನ್ ಪರ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು. ಉತ್ತರ ಪ್ರದೇಶ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ  "ತಪ್ಪಾಗಿ ವರದಿ ಮಾಡಲಾಗಿದೆ. ಇಂತಹ ವರದಿಗಳ ಕುರಿತು ಸ್ಪಷ್ಟೀಕರಣ ನೀಡಬೇಕಿದೆ.'' ಎಂದರು.

ನವೆಂಬರ್ 16ರಂದು ಈ ಹಿಂದಿನ ವಿಚಾರಣೆ ವೇಳೆ ಉತ್ತರ ಪ್ರದೇಶ ಸರಕಾರದ ಪ್ರತಿಕ್ರಿಯೆ ಕೇಳಿದ್ದ ಸುಪ್ರೀಂ ಕೋರ್ಟ್, "32ನೇ ವಿಧಿಯನ್ವಯ ದಾಖಲಾದ ಅಪೀಲನ್ನು ಉತ್ತೇಜಿಸುವ ಒಲವು ತಾನು ಹೊಂದಿಲ್ಲದೇ ಇರುವುದರಿಂದ ಅಪೀಲನ್ನು ಅಲಹಾಬಾದ್ ಹೈಕೋರ್ಟ್‍ಗೆ ವಾಪಸ್ ಕಳುಹಿಸಬಹುದು,'' ಎಂದು ಮೌಖಿಕವಾಗಿ ಹೇಳಿತ್ತು.

"ಹೈಕೋರ್ಟ್‍ಗೆ ನೀವು ಏಕೆ ಅಪೀಲು ಸಲ್ಲಿಸಿಲ್ಲ?'' ಎಂದು ಸಿಜೆಐ ಬೊಬ್ಡೆ ಅವರು ಕಪಿಲ್ ಸಿಬಲ್ ಅವರನ್ನು ಕೇಳಿದಾಗ ಕಪ್ಪನ್ ಅವರಿಗೆ ಅವರ ವಕೀಲರನ್ನೂ ಭೇಟಿಯಾಗಲು ಬಿಡುತ್ತಿಲ್ಲ ಎಂದು ಅವರು ತಿಳಿಸಿದ್ದರು. ನಂತರ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರಕಾರದ ಪ್ರತಿಕ್ರಿಯೆ ಕೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News