ಒಬ್ಬ ವ್ಯಕ್ತಿ ಹೇಳಿದ ಸುಳ್ಳಿನಿಂದ ಇಡೀ ರಾಜ್ಯ ಲಾಕ್ ಡೌನ್ !

Update: 2020-11-20 10:06 GMT
ಸಾಂದರ್ಭಿಕ ಚಿತ್ರ

ಸಿಡ್ನಿ: ಕೋವಿಡ್ ಕಾಂಟಾಕ್ಟ್ ಟ್ರೇಸರ್‍ಗಳ ತಂಡಕ್ಕೆ ಒಬ್ಬ ಸೋಂಕಿತ ನೀಡಿದ ಸುಳ್ಳು ಮಾಹಿತಿಯನ್ನು ಅಧಿಕಾರಿಗಳು ನಿಜವೆಂದೇ ನಂಬಿದ್ದರಿಂದ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಅತ್ಯಂತ ಕಠಿಣ ಆರು ದಿನಗಳ ಲಾಕ್ ಡೌನ್ ಹೇರುವಂತಾಗಿತ್ತು ಎಂದು ಈಗ ಬಹಿರಂಗಗೊಂಡಿದೆ.

ಜನರಿಗೆ ಮನೆಗಳಲ್ಲಿಯೇ ಉಳಿದುಕೊಳ್ಳುವಂತೆ ಹಾಗೂ ಹಲವಾರು ವಾಣಿಜ್ಯ ಮಳಿಗೆಗಳನ್ನು ಮುಚ್ಚುವಂತೆ ರಾಜ್ಯ ಸರಕಾರ ಘೋಷಿಸಿದ ಎರಡು ದಿನಗಳ ನಂತರ ಆ ವ್ಯಕ್ತಿ ಹೇಳಿದ್ದು ಸುಳ್ಳು ಎಂದು ತಿಳಿದು ಬಂದಿದೆ. ನಂತರ ಈಗ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದೆ.

ದಕ್ಷಿಣ ಆಸ್ಟ್ರೇಲಿಯಾದ ಆಡಳಿತ ಮುಖ್ಯಸ್ಥ ಸ್ಟೀವನ್ ಮಾರ್ಷಲ್ ಈ ಕುರಿತು ಮಾಹಿತಿ ನೀಡಿ, ಕೋವಿಡ್ ಸೋಂಕು ಹೆಚ್ಚು ಹರಡಲು ಕಾರಣವಾಯಿತು ಎಂದು ಹೇಳಲಾದ ಪಿಝಾ ಬಾರ್ ನಿಂದಾಗಿ ಸೋಂಕು ತಗಲಿದ್ದ ಒಬ್ಬ ವ್ಯಕ್ತಿಯಿಂದ ಕಾಂಟಾಕ್ಟ್ ಟ್ರೇಸರ್‍ಗಳು ಮಾಹಿತಿ ಕೇಳಿದಾಗ ತಾನು ಅಲ್ಲಿ ಕೇವಲ ಪಿಝಾ ಖರೀದಿಸಿದ್ದಾಗಿ ತಿಳಿಸಿದ್ದ. ಅಲ್ಲಿಗೆ ಕೇವಲ ಖರೀದಿಸಲು ಬಂದು ಸ್ವಲ್ಪ ಹೊತ್ತು ಇದ್ದಾಗಲೇ ಆತನಿಗೆ ಸೋಂಕು ತಗಲಿದೆಯೆಂದರೆ ಇದು ಅಪಾಯಕಾರಿ ಎಂದು ತಿಳಿದು ಕಠಿಣ ಲಾಕ್ ಡೌನ್ ಹೇರಲಾಗಿತ್ತು, ಆದರೆ ವಾಸ್ತವವಾಗಿ ಆತ ಅಲ್ಲಿಯೇ ಹಲವಾರು ಶಿಫ್ಟ್ ಗಳಲ್ಲಿ ಕೆಲಸ ಮಾಡಿದ್ದ ಹಾಗೂ ಆತನ ಸಹೋದ್ಯೋಗಿಗೂ ಕೋವಿಡ್ ಪಾಸಿಟಿವ್ ಇತ್ತು ಎಂದು ನಂತರ ತಿಳಿದು ಬಂದಿತ್ತು ಎಂದು ಅವರು ಹೇಳಿದ್ದಾರೆ.

ಅಲ್ಲಿನ ಕೋವಿಡ್ ಪರಿಸ್ಥಿತಿ ಕಳವಳಕಾರಿಯಾಗಿದ್ದರೂ ಕಠಿಣ ಲಾಕ್ ಡೌನ್ ಸಡಿಲಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ತರುವಾಯ ಆರೋಗ್ಯ ಸಿಬ್ಬಂದಿಗೆ ಸುಳ್ಳು ಹೇಳಿದ ತಪ್ಪಿಗೆ ಸದ್ಯದ ಕಾನೂನಿನಲ್ಲಿ ಯಾವುದೇ ಶಿಕ್ಷೆಯಿಲ್ಲವಾದರೂ ಈ ಕುರಿತು ಪರಿಶೀಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News