ದೇಶದಲ್ಲಿ ಬೆಟ್ಟಿಂಗ್‌ ಕಾನೂನುಬದ್ಧಗೊಳಿಸುವ ಪರ ಕೇಂದ್ರ ಸಚಿವರ ಬ್ಯಾಟಿಂಗ್

Update: 2020-11-20 17:25 GMT

 ಹೊಸದಿಲ್ಲಿ,ನ.20: ಬೆಟ್ಟಿಂಗ್‌ನ್ನು ಶಾಸನಬದ್ಧಗೊಳಿಸಿ ಅದನ್ನು ವಿಧ್ಯುಕ್ತ ಆರ್ಥಿಕತೆಯಲ್ಲಿ ತರುವುದರಿಂದ ಮ್ಯಾಚ್ ಫಿಕ್ಸಿಂಗ್‌ನಂತಹ ಕೆಟ್ಟ ಮತ್ತು ಭ್ರಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಲು ನೆರವಾಗುತ್ತದೆ,ಜೊತೆಗೆ ತೆರಿಗೆ ಆದಾಯವೂ ಲಭಿಸುತ್ತದೆ ಎಂದು ಕೇಂದ್ರದ ಸಹಾಯಕ ವಿತ್ತ ಸಚಿವ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಶುಕ್ರವಾರ ಇಲ್ಲಿ ಹೇಳಿದರು.

ಅವರು ಐಸಿಐಸಿಐ ಸೆಕ್ಯೂರಿಟಿಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯ ಹಾಗೂ ಮ್ಯೂಚ್ಯುವಲ್ ಫಂಡ್ ಉದ್ಯಮದ ಹಿರಿಯ ತಲೆ ನಿಲೇಶ್ ಶಾ ಅವರು ದೇಶದಲ್ಲಿ ಬೆಟ್ಟಿಂಗ್‌ನ್ನು ಶಾಸನಬದ್ಧಗೊಳಿಸಬೇಕೆಂಬ ಸಲಹೆಗೆ ಪ್ರತಿಕ್ರಿಯಿಸುತ್ತಿದ್ದರು.

ವಿಶ್ವದ ಹಲವಾರು ದೇಶಗಳಲ್ಲಿ ಕ್ರೀಡೆಗಳ ಮೇಲೆ ಬೆಟ್ಟಿಂಗ್ ಕಾನೂನುಬದ್ಧವಾಗಿದೆ. ಭಾರತದಲ್ಲಿಯೂ ಬೆಟ್ಟಿಂಗ್ ಜಾಲಗಳು ಆಗಾಗ ಬಹಿರಂಗಗೊಳ್ಳುತ್ತಿವೆ.

 ಲಾಸ್‌ವೆಗಾಸ್,ಮಕಾವು ಮತ್ತು ನೇಪಾಳದಂತಹ ಸ್ಥಳಗಳಲ್ಲಿ ವ್ಯಾಪಕವಾಗಿರುವ ಬೆಟ್ಟಿಂಗ್ ಮತ್ತು ಜೂಜಾಟದ ನೈಸರ್ಗಿಕ ಪ್ರವೃತ್ತಿ ಭಾರತೀಯರಲ್ಲಿಯೂ ಇದೆ ಎಂದು ಹೇಳಿದ್ದ ಶಾ,ಭೂಗತವಾಗಿರುವ ಬೆಟ್ಟಿಂಗ್ ಮತ್ತು ಜೂಜಾಟಗಳನ್ನು ಕಾನೂನುಬದ್ಧಗೊಳಿಸುವಂತೆ ಸಲಹೆ ನೀಡಿದ್ದರು. ಇವು ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿವೆ ಎಂದು ಅವರು ಬೆಟ್ಟು ಮಾಡಿದ್ದರು.

ಆಸ್ಟ್ರೇಲಿಯಾ ಮತ್ತು ಇಂಗ್ಲಂಡ್‌ನಂತಹ ದೇಶಗಳಲ್ಲಿ ಬೆಟ್ಟಿಂಗ್ ಕಾನೂನುಬದ್ಧವಾಗಿದೆ. ಈ ಚಟುವಟಿಕೆಗಳಿಂದ ಸರಕಾರಿ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಗಳ ಆದಾಯ ಲಭಿಸುತ್ತಿದೆ ಮತ್ತು ಇದನ್ನು ಕ್ರೀಡೆ ಅಥವಾ ಇತರ ಚಟುವಟಿಕೆಗಳ ಅಭಿವೃದ್ಧಿಗಾಗಿ ವ್ಯಯಿಸಲಾಗುತ್ತದೆ ಎಂದು ಠಾಕೂರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News