ದೇಶದಲ್ಲಿ 9 ದಿನಗಳಲ್ಲೇ ಮತ್ತೆ ಗರಿಷ್ಠ ಮಟ್ಟಕ್ಕೆ ಕೊರೋನ

Update: 2020-11-21 03:37 GMT

ಹೊಸದಿಲ್ಲಿ, ನ.21: ಎರಡು ರಾಜ್ಯಗಳಲ್ಲಿ ಶುಕ್ರವಾರ ಅತಿಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗಿದ್ದು, ದೇಶಾದ್ಯಂತ ದೈನಿಕ ಪ್ರಕರಣಗಳ ಸಂಖ್ಯೆ ಒಂಭತ್ತು ದಿನಗಳ ಗರಿಷ್ಠ ಮಟ್ಟ ತಲುಪಿದೆ.

ದೇಶದಲ್ಲಿ ಶನಿವಾರ 46,328 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಇದು ನವೆಂಬರ್ 11ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಸತತ ಐದನೇ ದಿನ ಏರಿಕೆ ಪ್ರವೃತ್ತಿ ಕಂಡುಬಂದಿದೆ. ಶುಕ್ರವಾರ 563 ಮಂದಿ ಮೃತಪಟ್ಟಿದ್ದು, ಸತತ ಮೂರನೇ ದಿನ ಸಾವಿನ ಸಂಖ್ಯೆ 500ಕ್ಕಿಂತ ಅಧಿಕ ಇದೆ. ಆದರೆ ಗುರುವಾರ ದಾಖಲಾದ ಸಾವಿನ ಸಂಖ್ಯೆ (589)ಗೆ ಹೋಲಿಸಿದರೆ ಇದು ಕಡಿಮೆ.

ಕಳೆದ ಏಳು ದಿನಗಳಲ್ಲಿ ಎರಡನೇ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ದಾಖಲಾಗಿಲ್ಲ. ಇದು ಸಾಂಕ್ರಾಮಿಕ ಮತ್ತೆ ಏರಬಹುದು ಎನ್ನುವ ಸ್ಪಷ್ಟ ಸೂಚನೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,45,804 ಆಗಿದೆ.

ದೀಪಾವಳಿ ಬಳಿಕ ಉತ್ತರ ಮತ್ತು ಕೇಂದ್ರ ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಹರ್ಯಾಣದಲ್ಲಿ 3,104 ಹೊಸ ಪ್ರಕರಣ ದಾಖಲಾಗಿದ್ದು, ಮೊದಲ ಬಾರಿಗೆ ಪ್ರಕರಣಗಳ ಸಂಖ್ಯೆ 3 ಸಾವಿರಕ್ಕಿಂತ ಹೆಚ್ಚಾಗಿದೆ. ರಾಜಸ್ಥಾನ ಕೂಡಾ 2,762 ಪ್ರಕರಣಗಳನ್ನು ದಾಖಲಿಸಿದ್ದು, ಇದು ಕೂಡಾ ಇದುವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಉತ್ತರ ಪ್ರದೇಶದಲ್ಲಿ 2,858 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಅಕ್ಟೋಬರ್ 17ರ ಬಳಿಕ ಗರಿಷ್ಠ ಪ್ರಮಾಣವಾಗಿದೆ. ಗುಜರಾತ್‌ನಲ್ಲಿ ಕೂಡಾ ಸೆಪ್ಟಂಬರ್ 25ರ ಬಳಿಕದ ಅತಿಹೆಚ್ಚು ಪ್ರಕರಣ ಶುಕ್ರವಾರ ದಾಖಲಾಗಿದ್ದು, 1,420 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಮಧ್ಯಪ್ರದೇಶದಲ್ಲಿ 1,528 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಅಕ್ಟೋಬರ್ 14ರ ಬಳಿಕದ ಗರಿಷ್ಠ ಸಂಖ್ಯೆ.

ಆದಾಗ್ಯೂ ದಿಲ್ಲಿಯಲ್ಲಿ ಗುರುವಾರ ದಾಖಲಾದ 7,546 ಪ್ರಕರಣಗಳಿಗೆ ಹೋಲಿಸಿದರೆ ಶುಕ್ರವಾರ 6,608 ಪ್ರಕರಣಗಳು ಮಾತ್ರ ದಾಖಲಾಗಿವೆ. ಆದರೂ ರಾಜ್ಯದಲ್ಲಿ 118 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 5,640 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News