ಬಿಹಾರ ಚುನಾವಣೆಗೆ ಮುನ್ನ 282.29 ಕೋಟಿ ರೂ. ಮೌಲ್ಯದ ಇಲೆಕ್ಟೋರಲ್ ಬಾಂಡ್ ಮಾರಾಟ

Update: 2020-11-21 09:37 GMT

ಹೊಸದಿಲ್ಲಿ: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ. 282.29 ಕೋಟಿಗೂ ಅಧಿಕ ಮೌಲ್ಯದ ಇಲೆಕ್ಟೋರಲ್ ಬಾಂಡ್‍ಗಳನ್ನು ಮಾರಾಟ ಮಾಡಿದೆ ಎಂದು ಆರ್ ಟಿ ಐ ಮಾಹಿತಿಯಿಂದ ತಿಳಿದು ಬಂದಿದೆ.

ನಿವೃತ್ತ ನೌಕಾದಳ ಅಧಿಕಾರಿ ಲೋಕೇಶ್ ಕೆ ಬಾತ್ರಾ ಎಂಬವರು ಎಸ್‍ಬಿಐಗೆ ಸಲ್ಲಿಸಿದ್ದ ಆರ್ ಟಿ ಐ ಅರ್ಜಿಯಿಂದ ಈ ಮಾಹಿತಿ ದೊರಕಿದೆ. ಅಕ್ಟೋಬರ್ 19 ಹಾಗೂ ಅಕ್ಟೋಬರ್ 28ರ ನಡುವೆ ಯಾವ್ಯಾವ ಶಾಖೆಗಳಲ್ಲಿ ಎಷ್ಟು ಮೌಲ್ಯದ ಇಲೆಕ್ಟೋರಲ್ ಬಾಂಡ್‍ಗಳ ಮಾರಾಟವಾಗಿವೆ ಎಂಬ ಕುರಿತು ಅವರು ಮಾಹಿತಿ ಕೇಳಿದ್ದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಮಾಹಿತಿಯಂತೆ ರೂ. 282,29,01,000 ಮೌಲ್ಯದ ಬಾಂಡ್‍ಗಳನ್ನು ಅದರ ಒಂಬತ್ತು  ಶಾಖೆಗಳ ಮುಖಾಂತರ ಮಾರಾಟ ಮಾಡಲಾಗಿದೆಯೆಂದು ತಿಳಿದು ಬಂದಿದೆ. ತಲಾ 1 ಕೋಟಿ ರೂ. ಮೌಲ್ಯದ 279 ಬಾಂಡ್‍ಗಳು ಮಾರಾಟವಾಗಿದ್ದರೆ ತಲಾ 10 ಲಕ್ಷ ರೂ. ಮೌಲ್ಯದ 32 ಬಾಂಡ್‍ಗಳು ಹಾಗೂ ತಲಾ ಒಂದು ಲಕ್ಷ ಮೌಲ್ಯದ ಒಂಬತ್ತು ಬಾಂಡ್‍ಗಳು ಮಾರಾಟವಾಗಿದೆ ಹಾಗೂ ರೂ. 1,000 ಮೌಲ್ಯದ ಒಂದು ಇಲೆಕ್ಟೋರಲ್ ಬಾಂಡ್ ನಗದೀಕರಿಸದೆ ಅದನ್ನು ಪ್ರಧಾನ ಮಂತ್ರಿಯ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ತರುವಾಯ 'ಇಂಡಿಯನ್ ಎಕ್ಸ್ ಪ್ರೆಸ್' ಕೂಡ ಇದೇ ಮಾಹಿತಿಯನ್ನು ಕೇಳಿ ಸಲ್ಲಿಸಿದ್ದ ಪ್ರತ್ಯೇಕ ಆರ್ ಟಿ ಐ ಅರ್ಜಿಗೆ ನೀಡಿದ ಉತ್ತರದಲ್ಲಿ ಬ್ಯಾಂಕ್‍ನ ಮುಂಬೈ ಶಾಖೆ 130 ಕೋಟಿ ರೂ. ಮೌಲ್ಯದ ಬಾಂಡ್, ಹೊಸದಿಲ್ಲಿ ಶಾಖೆ 11.99 ಕೋಟಿ ರೂ. ಮೌಲ್ಯದ ಬಾಂಡ್ ಮಾರಾಟ ಮಾಡಿದೆ ಎಂಬ ಮಾಹಿತಿ ದೊರಕಿದೆ. ಹೈದರಾಬಾದ್, ಚೆನ್ನೈ, ಭುಬನೇಶ್ವರ ಹಾಗೂ ಪಾಟ್ನಾ ಶಾಖೆಗಳ ಮುಖಾಂತರ ಕ್ರಮವಾಗಿ ರೂ. 90 ಕೋಟಿ, ರೂ. 80 ಕೋಟಿ, ರೂ. 67 ಕೋಟಿ ಹಾಗೂ ರೂ. 80 ಕೋಟಿ ಮೌಲ್ಯದ  ಬಾಂಡ್‍ಗಳು ಮಾರಾಟವಾಗಿವೆ ಎಂದು ಆರ್ ಟಿ ಐ ಉತ್ತರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News