ಇರಾಕ್: ಉಗ್ರರ ದಾಳಿಗೆ 9 ಮಂದಿ ಭದ್ರತಾ ಸಿಬ್ಬಂದಿ, ನಾಗರಿಕರು ಬಲಿ
ಬಗ್ದಾದ್, ನ.22: ಉತ್ತರ ಬಗ್ದಾದ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಇರಾಕ್ ಭದ್ರತಾ ಪಡೆಯ ಆರು ಸಿಬ್ಬಂದಿ ಹಾಗೂ ಮೂವರು ನಾಗರಿಕರು ಮೃತಪಟ್ಟಿದ್ದಾರೆ.
ರಸ್ತೆ ಬದಿಯ ಬಾಂಬ್ ಕಾರಿಗೆ ಬಡಿದಿದ್ದು, ಪರಿಹಾರ ಕಾರ್ಯಾಚರಣೆಗೆ ಆಗಮಿಸಿದ ಪೊಲೀಸ್ ಮತ್ತು ಅರೆ ಮಿಲಿಟರಿ ಪಡೆ ತಂಡದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು ಎಂದು ಅಧಿಕೃತ ಮೂಲಗಳು ಹೇಳಿವೆ. ರಾಜಧಾನಿಯಿಂದ 200 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.
ಹಶೇದ್ ಅಲ್ ಶಾಬಿಯ ನಾಲ್ವರು ಹಾಗೂ ಇಬ್ಬರು ಪೊಲೀಸರು, ಮೂವರು ನಾಗರಿಕರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ರೌಯಿಯಾ ನಗರದ ಮೇಯರ್ ಮುಹಮ್ಮದ್ ಜಿದಾನೆ ಹೇಳಿದ್ದಾರೆ.
ದಾಳಿಕೋರರ ತಂಡದಲ್ಲಿ ಎಷ್ಟು ಸಾವು ನೋವು ಸಂಭವಿಸಿದೆ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ದಾಳಿಯಲ್ಲಿ ಮೃತಪಟ್ಟ ಭದ್ರತಾ ಸಿಬ್ಬಂದಿ ಸುನ್ನಿ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದಾರೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತಿಲ್ಲವಾದರೂ, ಇದು ಇಸ್ಲಾಮಿಕ್ ಸ್ಟೇಟ್ ಉಗ್ರರ ಕೃತ್ಯ ಎಂದು ಪೊಲೀಸರು ಮತ್ತು ಮೇಯರ್ ಹೇಳಿದ್ದಾರೆ.
ನವೆಂಬರ್ 8ರಂದು ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ನಡೆದ ಐಎಸ್ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದರು.