ಅನುಕಂಪದ ನೆಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ತಂದೆಯನ್ನೇ ಕೊಂದ ನಿರುದ್ಯೋಗಿ ಮಗ !

Update: 2020-11-22 09:11 GMT

ಹೊಸದಿಲ್ಲಿ:ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಉದ್ಯೋಗದ ಹುಡುಕಾಟದಲ್ಲಿದ್ದ ನಿರುದ್ಯೋಗಿ ಯುವಕನೊಬ್ಬ ಅನುಕಂಪದ ನೆಲೆಯಲ್ಲಿ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುವ ದುರಾಲೋಚನೆ ಮಾಡಿ ಸರಕಾರಿ ಉದ್ಯೋಗಿಯಾಗಿದ್ದ ತನ್ನ ತಂದೆಯನ್ನೇ ಕೊಂದಿರುವ ಘಟನೆ ವರದಿಯಾಗಿದೆ.

ಮಗನಿಂದ ಹತ್ಯೆಗೀಡಾಗಿರುವ 55ರ ವಯಸ್ಸಿನ ಕೃಷ್ಣ ರಾಮ್ ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್(ಸಿಸಿಎಲ್)ನಲ್ಲಿ ಕೆಲಸ ಮಾಡುತ್ತಿದ್ದರು. ಸರಕಾರಿ ಸ್ವಾಮ್ಯದ ಕಂಪೆನಿಯಲ್ಲಿ ಅನುಕಂಪದ ನೆಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಮಗನೇ ತಂದೆಯನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊಲೆಗೀಡಾಗಿರುವ ಕೃಷ್ಣ ರಾಮ್ ರಾಮಗಢ ಜಿಲ್ಲೆಯ ಬಾರ್ಕಾಕಾನದಲ್ಲಿರುವ ಸಿಸಿಎಲ್‌ನ ಸೆಂಟ್ರಲ್ ವರ್ಕ್‌ಶಾಪ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಗಂಟಲು ಸೀಳಿದ ಸ್ಥಿತಿಯಲ್ಲಿ ಗುರುವಾರ ಬೆಳಗ್ಗೆ ಕೃಷ್ಣ ರಾಮ್ ಪತ್ತೆಯಾಗಿದ್ದರು ಎಂದು ಪೊಲೀಸರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ರಾಮ್ ಅವರ 35ರ ವಯಸ್ಸಿನ ಹಿರಿಯ ಮಗ ಬುಧವಾರ ರಾತ್ರಿ ಈ ಕೃತ್ಯ ಎಸೆಗಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಸಣ್ಣ ಚಾಕು ಹಾಗೂ ಯುವಕನ ಮೊಬೈಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಅನುಕಂಪದ ನೆಲೆಯಲ್ಲಿ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಂದೆಯನ್ನು ಹತ್ಯೆಗೈದಿರುವುದಾಗಿ ರಾಮ್ ಅವರ ಮಗ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಎಲ್ ನಿಬಂಧನೆಗಳ ಪ್ರಕಾರ ನೌಕರನು ತನ್ನ ಸೇವೆಯ ಅವಧಿಯಲ್ಲಿ ಸತ್ತರೆ ಕಾನೂನು ಬದ್ದವಾಗಿ ಅವಲಂಬಿತರಿಗೆ ಕೆಲಸ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News