ಗಾಲ್ಫ್ ಆಡುವುದಕ್ಕಾಗಿ ಜಿ 20 ಶೃಂಗ ಸಭೆಯ ಅಧಿವೇಶನದಿಂದ ದೂರವುಳಿದ ಟ್ರಂಪ್
ವಾಷಿಂಗ್ಟನ್: ಸಾಂಕ್ರಾಮಿಕ ರೋಗ ಕೊರೋನ ಕುರಿತು ಚರ್ಚಿಸಲು ಮೀಸಲಾಗಿರುವ ವರ್ಚುವಲ್ ಜಿ-20 ಶೃಂಗ ಸಭೆಯ ಅಧಿವೇಶನದಿಂದ ದೂರವೇ ಉಳಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ರಾಜಧಾನಿಯ ಹೊರಗಿರುವ ತನ್ನ ಕ್ಲಬ್ ನಲ್ಲಿ ಗಾಲ್ಫ್ ಆಡಲು ತೆರಳಿದರು.
ತಮ್ಮ ವೇಳಾಪಟ್ಟಿಯನ್ವಯ ಶ್ವೇತಭವನವು ನೀಡುವ ದೈನಂದಿನ ಮಾರ್ಗದರ್ಶನದ ಪ್ರಕಾರ ಸ್ಥಳೀಯ ಕಾಲಮಾನ ಬೆಳಗ್ಗೆ 8 ಗಂಟೆಗೆ ಟ್ರಂಪ್ ಅವರು ಆನ್ ಲೈನ್ ಮುಖಾಂತರ ಮುಖ್ಯ ಭಾಷಣವನ್ನು ಮಾಡಿದರು. ಸ್ವಲ್ಪ ಸಮಯದ ನಂತರ ಅವರು ಚುನಾವಣೆಯ ಕುರಿತು ಟ್ವೀಟ್ ಮಾಡಿದರು. ಬೆಳಗ್ಗೆ 10ರ ಸುಮಾರಿಗೆ ವರ್ಜೀನಿಯಾದ ಲೌಡನ್ ನಲ್ಲಿರುವ ಟ್ರಂಪ್ ನ್ಯಾಶನಲ್ ಗಾಲ್ಫ್ ಕ್ಲಬ್ ಗೆ ತೆರಳಿದರು.
ನಾವು ಕೋವಿಡ್-19 ನ್ನು ನಿವಾರಿಸಿದ ಬಳಿಕ ಬಲವಾದ ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗಗಳನ್ನು ಪುನಃ ಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಸೌದಿ ಅರೇಬಿಯದ ಆತಿಥ್ಯದಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಯನ್ನು ಉದ್ದೇಶಿಸಿ ಟ್ರಂಪ್ ಮಾತನಾಡಿದ್ದಾರೆ ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ತಿಳಿಸಿದೆ.
ತನ್ನ ಆಡಳಿತವು ಆಕ್ರಮಣಕಾರಿ ಹಾಗೂ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದೆ. ದಾಖಲೆ ವೇಗದಲ್ಲಿ ಲಸಿಕೆಗಳು ಹಾಗೂ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತ ವಿಶ್ವ ನಾಯಕರನ್ನು ಉದ್ದೇಶಿಸಿ ಟ್ರಂಪ್ ಭಾಷಣ ಮಾಡಿದರು.
ನಿಮ್ಮೊಂದಿಗೆ ಕೆಲಸ ಮಾಡಿರುವುದು ಮಹಾ ಗೌರವ. ಮತ್ತೊಮ್ಮೆ ನಿಮ್ಮೊಂದಿಗೆ ದೀರ್ಘ ಸಮಯ ಕೆಲಸ ಮಾಡಲು ಎದುರು ನೋಡುತ್ತಿರುವೆ ಎಂದು ಶೃಂಗಸಭೆಯಲ್ಲಿ ನಿರ್ಗಮನ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.