ಚಂದ್ರನೆಡೆಗೆ ಈ ವಾರ ಚೀನಾದಿಂದ ಬಾಹ್ಯಾಕಾಶ ನೌಕೆ ಉಡಾವಣೆ

Update: 2020-11-22 16:58 GMT

ಬೀಜಿಂಗ್,ನ.22: ಮಾನವರಹಿತ ಬಾಹ್ಯಾಕಾಶ ನೌಕೆಯೊಂದನ್ನು ಚಂದ್ರನಲ್ಲಿ ಈ ವಾರದಲ್ಲಿ ಉಡಾವಣೆಗೊಳಿಸುವುದಾಗಿ ಚೀನಾ ರವಿವಾರ ತಿಳಿಸಿದೆ. ಚಂದ್ರನ ನೆಲದಿಂದ ಶಿಲೆಗಳನ್ನು ತರುವ ಉದ್ದೇಶದಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಗೊಳಿಸಲಾಗುತ್ತಿದೆ. 1970ರ ದಶಕದಿಂದೀಚೆಗೆ ಚಂದ್ರನ ನೆಲೆದಿಂದ ಶಿಲೆ ಹಾಗೂ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲು ನಡೆಯುತ್ತಿರುವ ಪ್ರಥಮ ಪ್ರಯತ್ನ ಇದಾಗಿದೆಯೆಂದು ಚೀನಾ ಬಣ್ಣಿಸಿದೆ.

  ಚಾಂಗೆ-5 ಎಂದು ಹೆಸರಿಡಲಾದ ಈ ಬಾಹ್ಯಾಕಾಶ ನೌಕೆಯು ಚಂದ್ರನ ನೆಲದಿಂದ ಸಂಗ್ರಹಿಸಲಿರುವ ಮಾದರಿಗಳು, ಭೂಮಿಯ ಉಪಗ್ರಹದ ಸಂರಚನೆಯ ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ವಿಜ್ಞಾನಿಗಳಿಗೆ ನೆರವಾಗಲಿದೆ.

ಒಂದು ವೇಳೆ ಈ ಬಾಹ್ಯಾಕಾಶ ಯಾನವು ಯಶಸ್ವಿಯಾದಲ್ಲಿ ಚಂದ್ರನ ನೆಲದಿಂದ ಮಾದರಿಗಳನ್ನು ಸಂಗ್ರಹಿಸಿದ ಮೂರನೇ ದೇಶ ಚೀನಾವಾಗಲಿದೆ. ದಶಕಗಳ ಹಿಂದೆ ಅಮೆರಿಕ ಹಾಗೂ ಸೋವಿಯತ್ ಯೂನಿಯನ್ ಚಂದ್ರನ ನೆಲದಿಂದ ಮಾದರಿಗಳನ್ನು ಸಂಗ್ರಹಿಸುವಲ್ಲಿ ಸಫಲವಾಗಿದ್ದವು.

 1969ರಿಂದ 1972ರವರೆಗೆ ಅಮೆರಿಕವು ಆರು ಬಾಹ್ಯಾಕಾಶ ನೌಕೆಗಳಲ್ಲಿ ಒಟ್ಟು 12 ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸಿದ್ದು, ಅಲ್ಲಿಂದ 382 ಕೆ.ಜಿ. ತೂಕದ ಬಂಡೆಗಲ್ಲುಗಳು ಹಾಗೂ ಮಣ್ಣನ್ನು ಯಶಸ್ವಿಯಾಗಿ ಭೂಮಿಗೆ ತರಲಾಗಿತ್ತು.

   ಸೋವಿಯತ್ ಯೂನಿಯನ್ 1970ರ ದಶಕದಲ್ಲಿ ಮೂರು ಯಶಸ್ವಿ ರಾಬೊಟಿಕ್ ಬಾಹ್ಯಾಕಾಶ ನೌಕೆಗಳನ್ನು ಚಂದ್ರನಲ್ಲಿಗೆ ಕಳುಹಿಸಿತ್ತು. 1976ರಲ್ಲಿ ಅದು ಉಡಾಯಿಸಿದ ಕೊನೆಯ ಬಾಹ್ಯಾಕಾಶ ನೌಕೆ ಲ್ಯೂನಾ 24, ಚಂದ್ರನಿಂದ 170.1 ಗ್ರಾಂ. ಮಣ್ಣಿನ ಮಾದರಿಗಳನ್ನು ಭೂಮಿಗೆ ಒಯ್ದು ತಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News