ಜಮ್ಮುಕಾಶ್ಮೀರದಲ್ಲಿ ಶಂಕಿತ ಭಯೋತ್ಪಾದಕರು ಬಳಸಿದ ಸುರಂಗ ಪತ್ತೆ

Update: 2020-11-22 17:39 GMT
Photo credit: DDNewslive/Twitter

ಜಮ್ಮುಕಾಶ್ಮೀರ, ನ. 22: ಪಾಕಿಸ್ತಾನದಿಂದ ದೇಶಕ್ಕೆ ನುಸುಳಲು ಜೈಶೆ ಮುಹಮ್ಮದ್ ಭಯೋತ್ಪಾದಕರು ಬಳಸಿದ್ದಾರೆ ಎಂದು ಶಂಕಿಸಲಾದ ಭೂಗತ ಸುರಂಗ ಮಾರ್ಗದ ಮೇಲೆ ಬೆಳಕು ಬೀರಲು ಸಾಂಬಾ ಜಿಲ್ಲೆಯ ಅಂತರ್ ರಾಷ್ಟ್ರೀಯ ಗಡಿಯ ಸಮೀಪ ಬೃಹತ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬಾನ್ ಟೋಲ್ ಪ್ಲಾಝಾದಲ್ಲಿ ಗುರುವಾರ ಭದ್ರತಾ ಸಿಬ್ಬಂದಿ ಪರಿಶೀಲನೆಗಾಗಿ ಟ್ರಕ್ಕೊಂದನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಈ ಸಂದರ್ಭ ಕಾಶ್ಮೀರದತ್ತ ತೆರಳುತ್ತಿದ್ದ ಟ್ರಕ್‌ನಲ್ಲಿದ್ದ ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಯೋಧರು ಸೂಕ್ತ ಪ್ರತ್ಯುತ್ತರ ನೀಡಿದ್ದರು.

ಈ ಗುಂಡಿನ ಚಕಮಕಿಯಲ್ಲಿ ನಾಲ್ವರು ಶಂಕಿತ ಉಗ್ರರು ಸಾವನ್ನಪ್ಪಿದ್ದರು. ನವೆಂಬರ್ 28ರಂದು ಆರಂಭವಾಗಲಿರುವ ಡಿಡಿಸಿಯ 8 ಹಂತದ ಚುನಾವಣೆಗೆ ಅಡ್ಡಿ ಉಂಟು ಮಾಡಲು ಈ ಭಯೋತ್ಪಾದಕರು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದರು. ಈ ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಪತ್ತೆಯಾದ ಸಾಮಗ್ರಿಗಳ ಆಧಾರದಲ್ಲಿ ಈ ಶಂಕಿತ ಭಯೋತ್ಪಾದಕರು ಪಾಕಿಸ್ತಾನದಿಂದ ಸಾಂಬಾಜಿಲ್ಲೆಯ ಭೂಗತ ಸುರಂಗದ ಮೂಲಕ ದೇಶದ ಒಳನುಸುಳಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಂಗವನ್ನು ಬೆಳಕಿಗೆ ತರುವ ಬೃಹತ್ ಕಾರ್ಯಾಚರಣೆಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶುಕ್ರವಾರದಿಂದ ಆರಂಭಿಸಿದೆ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News