ಶತಾಯುಷಿ ಮಾಜಿ ರೈಲ್ವೆ ಗಾರ್ಡ್‌ಗೆ ಒಲಿದ ದುಪ್ಪಟ್ಟು ಪಿಂಚಣಿಯ ಭಾಗ್ಯ

Update: 2020-11-23 14:44 GMT

ಮುಂಬೈ,ನ.23: ದೇಶದ ಅತ್ಯಂತ ಹಿರಿಯ, ಬದುಕುಳಿದಿರುವ ಮಾಜಿ ರೈಲ್ವೆ ಗಾರ್ಡ್‌ಗಳ ಪೈಕಿ ಒಬ್ಬರಾಗಿರುವ ಮಹಾರಾಷ್ಟ್ರದ ಭುಸಾವಳ ನಿವಾಸಿ ಕೇಶವ ನರಹರ ಬಾಪಟ್ ಅವರು ನ.21ರಂದು ಶತಾಯುಷಿಗಳ ಸಾಲಿಗೆ ಸೇರಿದ್ದಾರೆ. ಇದರೊಂದಿಗೆ ರೈಲ್ವೆ ಇಲಾಖೆಯಿಂದ ಅವರು ಪಡೆಯುತ್ತಿರುವ ಪಿಂಚಣಿ ಮೊತ್ತ ದುಪ್ಪಟ್ಟಾಗಿರುವ ಸಂಭ್ರಮವೂ ಸೇರಿಕೊಂಡಿದೆ.

ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಸ್ವಯಂ ನಿವೃತ್ತಿ ಪಡೆದಿದ್ದ ಬಾಪಟ್ 1951ರಲ್ಲಿ ಆಗಿನ ಗ್ರೇಟ್ ಇಂಡಿಯನ್ ಪೆನಿನ್ಸುಲಾರ್ ರೈಲ್ವೆ (ಜಿಐಪಿಆರ್)ಯನ್ನು ಸೇರಿದ್ದರು. ಅದೇ ವರ್ಷ ಅದು ಮಧ್ಯ ರೈಲ್ವೆ ಎಂಬ ಮರುನಾಮಕರಣವನ್ನು ಹೊಂದಿತ್ತು. 42 ವರ್ಷಗಳ ಹಿಂದೆ 1978ರಲ್ಲಿ ಗಾರ್ಡ್ ಆಗಿ ಬಾಪಟ್ ನಿವೃತ್ತರಾಗಿದ್ದರು.

ಬಾಪಟ್ ನೂರು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿ ಅವರ ಪಿಂಚಣಿಯನ್ನು ದುಪ್ಪಟ್ಟುಗೊಳಿಸಲು ಮಧ್ಯ ರೈಲ್ವೆಯು ನಿರ್ಧರಿಸಿದೆ. ಭುಸಾವಳ ರೈಲ್ವೆ ವಿಭಾಗೀಯ ಕಚೇರಿಯ ಅಧಿಕಾರಿಗಳು ರವಿವಾರ ಬಾಪಟ್ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿದರು.

ಸೇನೆಯಲ್ಲಿದ್ದಾಗ ದ್ವಿತೀಯ ಮಹಾಯುದ್ಧದಲ್ಲಿ ಹೋರಾಡಿದ್ದ ಬಾಪಟ್, ಹಲವಾರು ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News