ಬೈಡನ್ ದುರ್ಬಲ ಅಧ್ಯಕ್ಷ: ಚೀನಾದೊಂದಿಗೆ ಯುದ್ದಕ್ಕಿಳಿಯುವ ಸಾಧ್ಯತೆ

Update: 2020-11-23 16:17 GMT

 ಬೀಜಿಂಗ್,ನ.23: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಆಡಳಿತದಲ್ಲಿ ಅಮೆರಿಕದ ಜೊತೆಗಿನ ಬಾಂಧವ್ಯಗಳು ತಾನಾಗಿಯೇ ಸುಧಾರಣೆಯಾಗಲಿದೆಯೆಂಬ ಭ್ರಮೆಯನ್ನು ಚೀನಾವು ಕೈಬಿಡಬೇಕೆಂದು, ಚೀನಿ ಸರಕಾರದ ಉನ್ನತ ಸಲಹೆ ಗಾರರೊಬ್ಬರು ಸೋಮವಾರ ಹೇಳಿದ್ದಾರೆ. ಬೈಡನ್ ಆಡಳಿತದಲ್ಲೂ ಬೀಜಿಂಗ್ ಬಗ್ಗೆ ವಾಶಿಂಗ್ಟನ್ ಕಠಿಣ ನಿಲುವನ್ನು ತಾಳಲಿದ್ದು, ಅದನ್ನು ಎದುರಿಸಲು ಚೀನಾ ಸರಕಾರ ಸನ್ನದ್ಧವಾಗಿರಬೇಕೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬೈಡನ್ ದುರ್ಬಲ ಅಧ್ಯಕ್ಷನಾಗಿದ್ದು, ಅವರು ತನ್ನ ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೆ ಅವರು ಚೀನಾದೊಂದಿಗೆ ಯುದ್ಧಕ್ಕಿಳಿಯುವ ಸಾಧ್ಯತೆಯಿದೆಯೆಂದು ಶೆನ್‌ಜೆನ್ ನಗರದಿಂದ ಕಾರ್ಯಾಚರಿಸುತ್ತಿರುವ ಜಾಗತಿಕ ಹಾಗೂ ಸಮಕಾಲೀನ ಚೀನಾ ಅಧ್ಯಯನಗಳ ಸುಧಾರಿತ ಅಧ್ಯಯನ ಸಂಸ್ಥೆಯ ಡೀನ್ ಆಗಿರುವ ಝೆಂಗ್ ಯೊಂಗ್‌ನಿಯಾನ್ ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಜೊತೆಗಿನ ಬಾಂಧವ್ಯಗಳನ್ನು ಸುಧಾರಿಸಲು ತನಗೆ ದೊರೆಯುವ ಪ್ರತಿಯೊಂದು ಅವಕಾಶವನ್ನು ಚೀನಿ ಸರಕಾರವು ಬಳಸಿಕೊಳ್ಳಬೇಕೆಂದು ಝೆಂಗ್, ಚೀನಿ ಆಡಳಿತಕ್ಕೆ ಸಲಹೆ ನೀಡಿದ್ದಾರೆ.

‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆಗೆ ಸಂದರ್ಶನ ನೀಡಿದ ಝೆಂಗ್ ಅವರು, ‘‘ ಹಿಂದಿನ ಒಳ್ಳೆಯ ದಿನಗಳು ಸರಿದುಹೋಗಿವೆ. ಅಮೆರಿಕದಲ್ಲಿ ಶೀತಲ ಸಮರದ ರಣಹದ್ದುಗಳು ಕಳೆದ ಕೆಲವು ವರ್ಷಗಳಿಂದ ಅತ್ಯಂತ ಸನ್ನದ್ಧ ಸ್ಥಿತಿಯಲ್ಲಿದ್ದು, ಅವು ರಾತ್ರೋರಾತ್ರಿ ಕಣ್ಮರೆಯಾಗಲಾರವು’’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

  ಚೀನಾದ ಬಗೆ ಅಮೆರಿಕದಲ್ಲಿರುವ ಅಸಮಾಧಾನವನ್ನು ಬೈಡನ್ ಅವರು ಶ್ವೇತಭವನ ಪ್ರವೇಶಿಸಿದ ಬಳಿಕ ತನ್ನ ಪ್ರಯೋಜನಕ್ಕೆ ಬಳಸುವ ಸಾಧ್ಯತೆಯಿದೆ ಎಂದು ಝೆಂಗ್ ಅಭಿಪ್ರಾಯಿಸಿದರು. ‘‘ ಅಮೆರಿಕದ ಸಮಾಜವು ಹರಿದು ಹೋಗಿದೆ. ಈ ಬಗ್ಗೆ ಬೈಡನ್ ಅವರು ಏನನ್ನಾದರೂ ಮಾಡಬಹುದೆಂದು ನಾನು ಭಾವಿಸಲಾರೆ’’ ಎಂದು ಝೆಂಗ್ ತಿಳಿಸಿದರು.

ಖಂಡಿತವಾಗಿಯೂ ಬೈಡನ್ ದುರ್ಬಲ ಅಧ್ಯಕ್ಷರಾಗಿದ್ದಾರೆ. ಒಂದು ವೇಳೆ ಅವರಿಗೆ ಸ್ವಂತ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೆ ಇದ್ದಲ್ಲಿ ಅವರು ರಾಜತಾಂತ್ರಿಕ ವಲಯದಲ್ಲಿ ಅದರಲ್ಲೂ ಚೀನಾದ ವಿರುದ್ಧ ಏನಾದರೂ ತಂತ್ರಗಾರಿಕೆ ನಡೆಸುವ ಸಾಧ್ಯತೆಯಿದೆ. ಟ್ರಂಪ್ ಅವರಿಗೆ ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯವನ್ನು ಉತ್ತೇಜಿಸುವ ಆಸಕ್ತಿಯಿರಲಿಲ್ಲ ಮತ್ತು ಅವರಿಗೆ ಯುದ್ಧದಲ್ಲಿಯೂ ಆಸಕ್ತಿಯಿರಲಿಲ್ಲ. ಆದರೆ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷರಾದ ಬೈಡನ್ ಯುದ್ಧವನ್ನು ಆರಂಭಿಸುವ ಸಾಧ್ಯತೆಯಿದೆ’’ ಎಂದು ಝೆಂಗ್ ಆತಂಕ ವ್ಯಕ್ತಪಡಿಸಿದ್ದಾರೆ.

 ಕೋವಿಡ್-19 ನಿರ್ವಹಣೆ, ವ್ಯಾಪಾರ ಹಾಗೂ ಮಾನವಹಕ್ಕುಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಅಧ್ಯಕ್ಷ ಟ್ರಂಪ್ ಆಡಳಿತದಲ್ಲಿ ಚೀನಾದೊಂದಿಗಿನ ಅಮೆರಿಕದ ಸಂಬಂಧ ಹದಗೆಟ್ಟಿದೆ.

  ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಚೀನಾದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಬೈಡನ್, ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಕೊಲೆಗಡುಕ ಎಂದು ನಿಂದಿಸಿದ್ದರು. ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಉಯಿಘರ್ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದಮನ ಕಾರ್ಯಾಚರಣೆಗಳ ಬಗ್ಗೆ ಚೀನಾವನ್ನು ಪ್ರಶ್ನಿಸುವುದಾಗಿ ಬೈಡನ್ ಚುನಾವಣಾ ಪ್ರಚಾರದಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News