ಅಸ್ಟ್ರಾಝೆಂಕ್‌ನ ಕೋವಿಡ್-19 ಲಸಿಕೆ ಶೇ.70ರಷ್ಟು ಪರಿಣಾಮಕಾರಿ

Update: 2020-11-23 16:35 GMT

ಲಂಡನ್,ನ.23: ಆಕ್ಸ್‌ಫರ್ಡ್ ವಿವಿಯ ಜೊತೆಗೂಡಿ ತಾನು ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯು, ಕೊರೋನ ವೈರಸ್ ಸೋಂಕಿನ ವಿರುದ್ಧ ರಕ್ಷಣೆ ನೀಡುವಲ್ಲಿ ಶೇ.70ರಷ್ಟು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆಯೆಂದು ಸ್ವೀಡನ್- ಬ್ರಿಟಿಶ್ ಮೂಲದ ಬಯೋಟೆಕ್ ಸಂಸ್ಥೆ ಅಸ್ಟ್ರಾಝೆಂಕಾ ಸೋಮವಾರ ಘೋಷಿಸಿದೆ.

ಮಧ್ಯಂತರ ವಿಶ್ಲೇಷಣೆಯ ಪ್ರಕಾರ ಒಟ್ಟು 131 ಕೋವಿಡ್-19 ಪ್ರಕರಣಗಳಲ್ಲಿ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಆದರೆ ಇವರಲ್ಲಿ ಯಾರಿಗೂ ಕೂಡಾ ಗಂಭೀರವಾದ ರೋಗವಿರಲಿಲ್ಲ ಅಥವಾ ಆಸ್ಪತ್ರೆಗೆ ದಾಖಲಾಗುವ ಅಗತ್ಯವುಂಟಾಗಿರಲಿಲ್ಲ. ಲಸಿಕೆ ಪ್ರಯೋಗದ ಬಳಿಕವೂ ಇವರಲ್ಲಿ ಯಾರಿಗೂ ಕೂಡಾ ಗಂಭೀರವಾದ ದುಷ್ಪರಿಣಾಮವು ಉಂಟಾಗಿರಲಿಲ್ಲವೆಂದು ಅಸ್ಟ್ರಾಝೆಂಕಾ ಸಂಸ್ಥೆಯ ಸಿಇಓ ಪ್ಯಾಸ್ಕಲ್ ಸೊರಿಯೊಟ್ ತಿಳಿಸಿದ್ದಾರೆ.

ಸಾಮಾನ್ಯಶೀತದ ವೈರಸ್ ಆಗಿರುವ ಅಡೆನೊವೈರಸ್‌ನಿಂದ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ ಹಾಗೂ ಅದನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂಗ್ರಹಿಸಿಡಬಹುದಾಗಿದೆ.

ಭಾರತದಲ್ಲಿ ಪುಣೆ ಮೂಲದ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಈ ಅಸ್ಟ್ರಾಝೆಂಕಾ ಲಸಿಕೆಯ ಉತ್ಪಾದಕ ಪಾಲುದಾರನಾಗಿದೆ.

ಈ ಲಸಿಕೆಯು ಭಾರತದಲ್ಲಿ ಲಭ್ಯವಾಗಲಿರುವ ಪ್ರಪ್ರಥಮ ಕೋವಿಡ್-19 ಲಸಿಕೆಯಾಗಲಿದೆ. ಕೋವಿಡ್-19 ವಿರುದ್ಧ ಈ ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದೆ ಹಾಗೂ ಸಾರ್ವಜನಿಕ ತುರ್ತು ಆರೋಗ್ಯಸ್ಥಿತಿಯ ಮೇಲೆ ಅದು ಕ್ಷಿಪ್ರವಾದ ಪರಿಣಾಮವನ್ನು ಬೀರಲಿದೆ ಎಂದು ಪ್ಯಾಸ್ಕಲ್ ಸೊರಿಯೊಟ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಸ್ಟ್ರಾಝೆಂಕಾ ಲಸಿಕೆಯ ಒಂದನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ 2,741 ಸ್ವಯಂಸೇವಕರಿಗೆ ಲಸಿಕೆಯನ್ನು ಅರ್ಧ ಡೋಸೆಜ್‌ನಲ್ಲಿ ನೀಡಲಾಗಿದ್ದು, ಅದು ಶೇ.90ರಷ್ಟು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ

ಒಂದು ತಿಂಗಳ ಆನಂತರ ಇತರ 8,895 ವ್ಯಕ್ತಿಗಳಿಗೆ ಎರಡು ಫುಲ್ ಡೋಸ್‌ಗಳನ್ನು ನೀಡಲಾಗಿದ್ದು, ಅವು ಶೇ.62ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ.

ಹೀಗೆ ಎರಡು ಹಂತಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಒಟ್ಟು 11,636 ಮಂದಿ ಲಸಿಕೆಯನ್ನು ಪಡೆದಿದ್ದು,ಅವುಗಳ ಸಂಯೋಜಿತ ವಿಶ್ಲೇಷಣೆಯು ಸರಾಸರಿ ಶೇ.70ರಷ್ಟು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ ಎಂದು ಅಸ್ಟ್ರಾಝೆಂಕಾ ಸಂಸ್ಥೆಯ ಹೇಳಿಕೆ ತಿಳಿಸಿದೆ.

ಸಂಸ್ಥೆಯು ಈ ದತ್ತಾಂಶಗಳನ್ನು ಜಗತ್ತಿನಾದ್ಯಂತದ ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಲಿದ್ದು, ಲಸಿಕೆಯನ್ನು ತ್ವರಿತವಾಗಿ ಬಿಡುಗಡೆಗೊಳಿಸಲು ಅನುಮೋದನೆಯನ್ನು ಕೋರಲಿದೆಯೆಂದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News