ಅರ್ನಬ್ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದ ಶಿವಸೇನೆ ಶಾಸಕನ ಮನೆ, ಕಚೇರಿಗಳ ಮೇಲೆ ಈಡಿ ದಾಳಿ
ಮುಂಬೈ: ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದ ಹಾಗೂ ಅರ್ನಬ್ ಮತ್ತಿತರ ಇಬ್ಬರ ಹೆಸರನ್ನು ಉಲ್ಲೇಖಿಸಿ ಸುಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆಗೈದ ಆರ್ಕಿಟೆಕ್ಟ್ ಅನ್ವಯ್ ನಾಯ್ಕ್ ಪ್ರಕರಣದ ಮರು ತನಿಖೆಗೆ ಕೋರಿದ್ದ ಶಿವಸೇನೆಯ ಓವಲ-ಮೈಜ್ವಾಡ ಕ್ಷೇತ್ರದ ಶಾಸಕ ಪ್ರತಾಪ್ ಸರ್‍ನಾಯಕ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದಾಳಿ ನಡೆಸಿದ್ದಾರೆ. ಥಾಣೆ ಮತ್ತು ಮುಂಬೈಯ ಹತ್ತು ಕಡೆಗಳಲ್ಲಿ ದಾಳಿ ನಡೆದಿದೆ. ಸೆಕ್ಯುರಿಟಿ ಸರ್ವಿಸಸ್ ಕಂಪೆನಿ ನಡೆಸುವ ಟಾಪ್ಸ್ ಗ್ರೂಪ್ ಎಂಬ ಸಂಸ್ಥೆಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆದಿದೆ. ಪ್ರತಾಪ್ ಅವರ ಪುತ್ರನ ಕಚೇರಿಯ ಮೇಲೂ ಈಡಿ ದಾಳಿ ನಡೆದಿದೆ.
ಕೇಂದ್ರ ಸರಕಾರವು ತನಿಖಾ ಏಜನ್ಸಿಗಳನ್ನು ತನ್ನ ಇಚ್ಚೆಗೆ ಬಂದಂತೆ ತನ್ನ ವಿರೋಧಿಗಳನ್ನು ಮಟ್ಟ ಹಾಕಲುಬಳಸುತ್ತಿದೆ ಎಂದು ಶಿವಸೇನೆಯ ವಕ್ತಾರೆ ಪ್ರಿಯಾಂಕ ಚತುರ್ವೇದಿ ಈಡಿ ದಾಳಿ ಖಂಡಿಸಿ ಟ್ವೀಟ್ ಮಾಡಿದ್ದಾರೆ.