ಫೋರ್ಬ್ಸ್ ಇಂಡಿಯಾದ 100 ಶ್ರೇಷ್ಠ ವ್ಯವಸ್ಥಾಪಕರ ಪಟ್ಟಿಯಲ್ಲಿ ಕೋಡಿ ಕುಂದಾಪುರದ ಗಣೇಶ್ ಪೂಜಾರಿ

Update: 2020-11-24 11:31 GMT

''ಸಯ್ಯದ್ ಬ್ಯಾರಿಯವರು ನಮ್ಮನ್ನು ಕೇವಲ ಪರೀಕ್ಷೆಗಾಗಿ ಸಜ್ಜುಗೊಳಿಸದೆ ಜೀವನದ ಸವಾಲುಗಳನ್ನು ಎದುರಿಸಲು ತರಬೇತುಗೊಳಿಸಿದರು''

ಕೋಡಿ ಕುಂದಾಪುರ ಮೂಲದ ಪ್ರಸ್ತುತ ಪ್ರತಿಷ್ಠಿತ ಲೋಧಾ ಗ್ರೂಪ್‌ನ ಎಡ್ಮಿನಿಸ್ಟ್ರೇಶನ್ ಹಾಗೂ ಎಚ್‌ಆರ್ ಸರ್ವಿಸಸ್‌ನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಗಣೇಶ್ ಪೂಜಾರಿ ಭಾರತದ 100 ಶ್ರೇಷ್ಠ  ವ್ಯವಸ್ಥಾಪಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ಇಂಡಿಯಾ ಸಹಭಾಗಿತ್ವದಲ್ಲಿ ಈ ಪಟ್ಟಿಯನ್ನು ‘ಗ್ರೇಟ್ ಪೀಪಲ್ ಮ್ಯಾನೇಜರ್ಸ್ ಸ್ಟಡಿ’ ಬ್ಯಾನರ್‌ನಡಿ ‘ಗ್ರೇಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಟ್’ಪ್ರಕಟಿಸುತ್ತಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಗಣೇಶ್ ಪೂಜಾರಿ ಪ್ರಾಥಮಿಕ ಶಾಲೆಯಲ್ಲಿ ಆಗಾಗ ಫೇಲ್ ಆಗಿದ್ದರೂ ಪ್ರಯತ್ನ ಬಿಡದೆ ಕಲಿತು, ಉನ್ನತ ವಿದ್ಯಾಭ್ಯಾಸ ಪಡೆದು ಕಠಿಣ ಪರಿಶ್ರಮದಿಂದ ಈ ವಿಶೇಷ ಸಾಧನೆ ಮಾಡಿದ್ದಾರೆ. 

ತನ್ನ ಹಳೆ ವಿದ್ಯಾರ್ಥಿಯ ಈ ವಿಶಿಷ್ಟ ಸಾಧನೆಗೆ ಕೋಡಿಯ ಹಾಜಿ ಕೆ. ಮೊಯ್ದೀನ್ ಬ್ಯಾರಿ ಹೈಸ್ಕೂಲ್ ನ  ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿಯವರು ಸಂತಸ ವ್ಯಕ್ತಪಡಿಸಿ, ಅಭಿನಂದನೆ  ಸಲ್ಲಿಸಿದ್ದಾರೆ.

‘‘ಕೋಡಿಯಲ್ಲಿನ ನಮ್ಮ ಶಾಲೆಯಿಂದ ಕಲಿತಿದ್ದ ನಮ್ಮ ಹಳೆ ವಿದ್ಯಾರ್ಥಿ ಗಣೇಶ್ ಪೂಜಾರಿವರ ಸಾಧನೆಯಿಂದ ನಮಗೆ ಹೆಮ್ಮೆ ಹಾಗೂ ಸಂತಸವಾಗಿದೆ. ಗಣೇಶ್ ಪೂಜಾರಿ ನಮ್ಮ ಶಾಲೆಯ ಮೊದಲ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದು, ಶ್ರದ್ಧೆಯಿಂದ ಕಲಿಯುತ್ತಿದ್ದರು. ಎಸೆಸೆಲ್ಸಿ ಬಳಿಕ ಮುಂಬೈಗೆ ತೆರಳಿದ ಅವರು ಅಲ್ಲಿ ಕೆಲಸದ ಜತೆಗೆ ತಮ್ಮ ಅಧ್ಯಯನ ಮುಂದುವರಿಸಿ ಹಂತ ಹಂತವಾಗಿ ಯಶಸ್ಸನ್ನು ಗಳಿಸುತ್ತಾ ಇದೀಗ ಭಾರತದ 100 ಶ್ರೇಷ್ಠ ವ್ಯವಸ್ಥಾಪಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅವರು ತಾವು ಬೆಳೆದು ಬಂದ ಹಾದಿಯನ್ನು ಮರೆತಿಲ್ಲ. ಹಾಗಾಗಿಯೇ ಅವರು ಹುಟ್ಟಿ ಬೆಳೆದ ಕೋಡಿ ಹಾಗೂ ಅವರ ಶಾಲೆಯ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ  ಯಶೋಗಾಥೆ ಗ್ರಾಮದ ಇನ್ನಷ್ಟು ವಿದ್ಯಾರ್ಥಿಗಳಿಗೆ  ಪ್ರೋತ್ಸಾಹದಾಯಕ ಹಾಗೂ ಉತ್ತೇಜನಕಾರಿಯಾಗಲಿದೆ ಎಂಬುದು ನಮ್ಮ ಆಶಯ’’ ಎಂದು ಸಯ್ಯದ್ ಬ್ಯಾರಿ ಅಭಿಪ್ರಾಯಿಸಿದ್ದಾರೆ.

'ವಾರ್ತಾಭಾರತಿ' ಜತೆ ಮಾತನಾಡಿದ  ಗಣೇಶ್ ಪೂಜಾರಿ ಈ ಗೌರವ  ಅನಿರೀಕ್ಷಿತವಾಗಿತ್ತು.   6000ಕ್ಕೂ ಹೆಚ್ಚು ವ್ಯವಸ್ಥಾಪಕರು ಆ ಸ್ಪರ್ಧೆಯಲ್ಲಿದ್ದರು. ಹಾಗಾಗಿ ಫೋರ್ಬ್ಸ್ 2020ರಲ್ಲಿ ಬಂದಿರುವುದು  ಸಂತಸ ತಂದಿದೆ.  ಇದು ನನ್ನ ಹಾಗೂ ನನ್ನ ಕುಟುಂಬಕ್ಕೆ ಕನಸು ನನಸಾದಂತಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನಾನು ಕುಂದಾಪುರದ ಕೋಡಿಯೆಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದವ. ನಮ್ಮ ಬಾಲ್ಯದಲ್ಲಿ ಈ ಗ್ರಾಮದಲ್ಲಿ ಯಾವುದೇ ಮೂಲ ಸೌಲಭ್ಯಗಳು ಇರಲಿಲ್ಲ.  ಇಂದು ಈ ಪ್ರದೇಶ ಕೋಡಿ ಬೀಚ್ ಹಾಗೂ ಬ್ಯಾರೀಸ್ ಗ್ರೂಪ್‌ನಿಂದ ನಡೆಸಲ್ಪಡುವ ಶ್ರೇಷ್ಠ ಶಿಕ್ಷಣ ಸಂಸ್ಥೆಗಳಿಂದ ಹೆಸರು ಪಡೆದಿದೆ. ಕೋಡಿಯ ಸೋನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದು ಬಳಿಕ ಹಾಜಿ ಕೆ. ಮೊಯ್ದೀನ್ ಬ್ಯಾರಿ ಹೈಸ್ಕೂಲ್‌ನಲ್ಲಿ ಶಿಕ್ಷಣ ಮುಂದುವರಿಸಿದೆ. ಎಸೆಸೆಲ್ಸಿ ಬಳಿಕ ನಾನು ಮುಂಬೈಗೆ ತೆರಳಿದೆ. ಪಿಯುಸಿಯನ್ನು ಮುಂಬೈನ ಕನ್ನಡ ಭವನ ಜೂನಿಯರ್ ಕಾಲೇಜ್‌ನಲ್ಲಿ ಪೂರೈಸಿದೆ. ಮುಂಬೈಯ ಸೈಂಟ್ ಕ್ಸೇವಿಯರ್ಸ್‌ನಿಂದ ಪದವಿ ಪಡೆದೆ. ಪಿಯುಸಿ ಮತ್ತು ಪದವಿ ಎರಡೂ ಶಿಕ್ಷಣವನ್ನು ಹಗಲು ಹೊತ್ತು ಕೆಲಸ ಮಾಡಿಕೊಂಡು ರಾತ್ರಿ ಕಾಲೇಜಿನ ಮೂಲಕ ಪಡೆದೆ. ಎಂಬಿಎ ಸ್ನಾತಕೋತ್ತರ ಪದವಿಯನ್ನು ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ಪಡೆದೆ. ನನ್ನ ಕಲಿಕಾ ಅವಧಿಯಲ್ಲಿ ಮುಂಬೈ ನನಗೆ ಸಾಕಷ್ಟು ಪರಿಶ್ರಮವನ್ನು ಕಲಿಸಿಕೊಟ್ಟಿದೆ. ಬೆಳಗ್ಗೆ 7.30ಗಂಟೆಯಿಂದ ಎರಡು ಗಂಟೆಗಳ ರೈಲು ಪ್ರಯಾಣದೊಂದಿಗೆ ನನ್ನ ದಿನ ಆರಂಭಗೊಳ್ಳುತ್ತಿತ್ತು. ಸಂಜೆ 6.30ರವರೆಗೆ ಕೆಲಸ. ಬಳಿಕ 9.30ರವರೆಗೆ ಕಾಲೇಜು, ಬಳಿಕ ಮತ್ತೆ 2 ಗಂಟೆಗಳ ರೈಲು ಪ್ರಯಾಣದೊಂದಿಗೆ ಮನೆ ಸೇರುತ್ತಿದ್ದೆ’’ ಎಂದು ಗಣೇಶ್ ಪೂಜಾರಿ ತಮ್ಮ ಬಾಲ್ಯ, ಕಾಲೇಜು ಜೀವನವನ್ನು ಮೆಲುಕು ಹಾಕುತ್ತಾರೆ.

ಕೋಡಿಯಲ್ಲಿ ಹೈಸ್ಕೂಲ್ ಆರಂಭಿಸುವಲ್ಲಿ ಸಯ್ಯದ್ ಬ್ಯಾರಿಯವರು ಪಟ್ಟ ಶ್ರಮ ಮತ್ತು ನೋವನ್ನು ನಾನು ನೆನಪಿಸಿಕೊಂಡು ಅವರಿಗೆ ಮನಪೂರ್ವಕವಾಗಿ ವಂದನೆಯನ್ನು ಸಲ್ಲಿಸಲೇಬೇಕು. ಆರಂಭದಲ್ಲಿ ಕೋಡಿಯ ಪ್ರತಿ ಮನೆಗೂ ಹೋಗಿ ಅವರು ಮಕ್ಕಳನ್ನು ಶಾಲೆಗೆ ಸೇರಿಸಲು ಮನವಿ ಮಾಡುತ್ತಿದ್ದರು.   ಶಾಲೆಯ ಪ್ರತಿಮಕ್ಕಳ ಶಿಕ್ಷಣದ ಬಗ್ಗೆ ಅವರು ಕಾಳಜಿ ವಹಿಸಿದರು.   7 ವರ್ಷಗಳಲ್ಲಿ ಪೂರೈಸುವ ಪ್ರಾಥವಮಿಕ ಶಿಕ್ಷಣ ಪೂರೈಸಲು ನಾವು 11 ವರ್ಷಗಳನ್ನು ತೆಗೆದು ಕೊಂಡಿದ್ದೆವು. ನಾಲ್ಕು ಬಾರಿ ನಾನು ಶಾಲೆಯಲ್ಲಿ ಫೇಲ್  ಆಗಿದ್ದೆ. ಇದನ್ನು ಹೇಳಿಕೊಳ್ಳಲು ನನಗೇನು ಮುಜಗರ ಇಲ್ಲ. ಈ ರೀತಿ ಡ್ರಾಪ್ ‌ಔಟ್ ಆಗುವ ನನ್ನಂತಹ ಬಹಳಷ್ಟು ಮಕ್ಕಳಿದ್ದಾರೆ. ನನ್ನ ಜೀವನ ಕಥೆ ಅಂತಹ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ಪ್ರೋತ್ಸಾಹದಾಯಕವಾಗಲಿ ಎಂಬುದು ನನ್ನ ಆಶಯ ಎಂದು ಹೇಳುತ್ತಾರೆ ಗಣೇಶ್ ಪೂಜಾರಿ.

ಸಯ್ಯದ್ ಬ್ಯಾರಿ ಅವರ ಕಾಳಜಿ ಹಾಗು ಶ್ರಮದಿಂದಾಗಿ ನಾನು ಎಸೆಸೆಲ್ಸಿಯನ್ನು ಒಂದೇ ಯತ್ನದಲ್ಲಿ  ಪಾಸಾದೆ.  ಪ್ರತಿ ತಿಂಗಳು ಕೋಡಿಗೆ ಭೇಟಿ ನೀಡುತ್ತಿದ್ದ ಅವರು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಮಾತನಾಡಿಸುತ್ತಿದ್ದರು. ನಮ್ಮ ಸಮಸ್ಯೆಗಳನ್ನು  ಅರಿಯಲು ಶಿಕ್ಷಕರನ್ನು  ಪ್ರೇರೇಪಿಸುತ್ತಿದ್ದರು. ಸಯ್ಯದ್ ಬ್ಯಾರಿಯವರು ನಮ್ಮನ್ನು ಕೇವಲ  ಪರೀಕ್ಷೆಗಾಗಿ ಸಜ್ಜುಗೊಳಿಸದೆ ಜೀವನದ ಸವಾಲುಗಳನ್ನು ಎದುರಿಸಲು ತರಬೇತು ಗೊಳಿಸಿದರು ಎಂದು ಸ್ಮರಿಸುತ್ತಾರೆ ಗಣೇಶ್ ಪೂಜಾರಿ.

ಲೋಧಾ ಗ್ರೂಪ್‌ಗೆ ಸೇರುವ ಮೊದಲು ಸುಮಾರು 4 ವರ್ಷ 6 ತಿಂಗಳು ಕಾಲ ಸ್ಟಾರ್‌ಟಿವಿಯ ಆಡಳಿತ ವಿಭಾಗದಲ್ಲಿ ಉಪಾಧ್ಯಕ್ಷನಾಗಿ, ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ 14 ವರ್ಷಗಳ ಕಾಲ ಕಾರ್ಪೊರೇಟ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಮುಖ್ಯಸ್ಥ ಮತ್ತು ಮುಖ್ಯ ವ್ಯಸ್ಥಾಪಕನಾಗಿ ಕಾರ್ಯ ನಿರ್ವಹಿಸಿ ದ್ದೇನೆ. ನನ್ನ ಜತೆಗಿರುವ ತಂಡದ ಪರಿಣಾಮವಾಗಿ ದೇಶದ 100 ಶ್ರೇಷ್ಠ ವ್ಯವಸ್ಥಾಪಕರಲ್ಲಿ ಒಬ್ಬರಾಗುವ ಅವಕಾಶ ದೊರಕಿದೆ.

ಯಾವುದೇ ಓರ್ವ ವ್ಯವಸ್ಥಾಪಕ ತನ್ನ ಸುತ್ತಲಿನ ಶ್ರೇಷ್ಠ ತಂಡದ ಹೊರತಾಗಿ ಶ್ರೇಷ್ಠ ವ್ಯವಸ್ಥಾಪಕನಾಗಲು ಸಾಧ್ಯವಿಲ್ಲ. ನಾಳೆಗಾಗಿ ಅವರನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದು, ತಂಡಕ್ಕಾಗಿ ಖರ್ಚು ಮಾಡಿ, ಹೂಡಿಕೆ ಮಾಡುವುದೇ ಅತ್ಯುತ್ತಮ ವ್ಯವಸ್ಥಾಪಕನ ಜವಾಬ್ಧಾರಿ. ಪ್ರತಿ ಹಂತದಲ್ಲಿ ತಂಡದ ಜತೆ ಅತ್ಯುತ್ತಮ ಸಂವಹನ ಅತ್ಯಗತ್ಯ. ತಂಡದೊಂದಿಗೆ ಹೆಚ್ಚು ಭಾಗಿಯಾಗಿದ್ದು, ಭೇಟಿಯಾದಂತೆ ಅವರಲ್ಲಿನ ಸಾಮರ್ಥ್ಯಗಳನ್ನು ಅರಿಯಲು ಮತ್ತು ಜವಾಬ್ಧಾರಿಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ತಂಡದ ನೂರಾರು ಮಂದಿಯನ್ನು ಮುನ್ನೆಡೆಸುವಾಗ ಅವರಲ್ಲಿನ ನೂರಾರು ವಿಷಯಗಳನ್ನು ಅರಿಯಲು, ಕಲಿಯಲು ಸಾಧ್ಯವಾಗುತ್ತದೆ. ಇದುವೇ ಶ್ರೇಷ್ಠ ವ್ಯವಸ್ಥಾಪಕನ ಯಶಸ್ಸಿನ ಹಿಂದಿನ ಗುಟ್ಟು ಎನ್ನುತ್ತಾರೆ ಗಣೇಶ್ ಪೂಜಾರಿ. 

ಸಯ್ಯದ್ ಬ್ಯಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News