ಅದಾನಿಗೆ ವಿಮಾನ ನಿಲ್ದಾಣ ಗುತ್ತಿಗೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇರಳ

Update: 2020-11-24 18:18 GMT

 ತಿರುವನಂತಪುರ, ನ. 24: ತಿರುವನಂತಪುರದ ಅಂತಾರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ತಡೆ ನೀಡುವಂತೆ ಕೋರಿ ಕೇರಳ ಸರಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಕೇಂದ್ರ ಸರಕಾರದ ನಿರ್ಧಾರದಲ್ಲಿ ಹಸ್ತಕ್ಷೇಪದ ವಿರುದ್ಧ ಕೇರಳ ಉಚ್ಚ ನ್ಯಾಯಾಲಯ ಕಳೆದ ತಿಂಗಳು ನೀಡಿದ ಆದೇಶ ಪ್ರಶ್ನಿಸಿ ರಾಜ್ಯ ಸರಕಾರ ಈ ಮೇಲ್ಮನವಿ ಸಲ್ಲಿಸಿದೆ. ಕೇಂದ್ರದ ಈ ನಿರ್ಧಾರ ಅನುಭವ ಇಲ್ಲದವರಿಗೆ ವಿಮಾನ ನಿಲ್ದಾಣ ನಿರ್ವಹಿಸಲು ಅನುಮತಿಸುತ್ತದೆ ಎಂದು ಮನವಿಯಲ್ಲಿ ಕೇರಳ ಸರಕಾರ ಹೇಳಿದೆ. 2019ರಲ್ಲಿ ಅದಾನಿ ಎಂಟರ್‌ಪ್ರೈಸಸ್ ಸರಕಾರಿ-ಖಾಸಗಿ ಸಹಭಾಗಿತ್ವದ ಮಾದರಿದಯ ಮೂಲಕ ಲಕ್ನೋ, ಅಹ್ಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರ ಹಾಗೂ ಗುವಾಹಟಿ ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಬಿಡ್ ಪಡೆದುಕೊಂಡಿತ್ತು. ಸರಕಾರಿ-ಖಾಸಗಿ ಸಹಭಾಗಿತ್ವದ ಮಾದರಿಯ ಮೂಲಕ ಜೈಪುರ, ಗುವಾಹಟಿ ಹಾಗೂ ತಿರುವನಂತಪುರ ವಿಮಾನ ನಿಲ್ದಾಣಗಳ ಗುತ್ತಿಗೆ ಪ್ರಸ್ತಾವಕ್ಕೆ ಈ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು. ಪ್ರಸ್ತುತ ಈ ವಿಮಾನ ನಿಲ್ದಾಣಗಳನ್ನು ಭಾರತದ ವಿಮಾನ ಪ್ರಾಧಿಕಾರ ನಿರ್ವಹಿಸುತ್ತಿದೆ. ತಿರುವನಂತಪುರ ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ 50 ವರ್ಷಗಳಿಗೆ ಗುತ್ತಿಗೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News