ಬೈಡನ್‌ರ ವಿದೇಶ ಕಾರ್ಯದರ್ಶಿಯಾಗಿ ಆ್ಯಂಟನಿ ಬ್ಲಿಂಕೆನ್

Update: 2020-11-24 16:28 GMT
ಫೋಟೊ ಕೃಪೆ: twitter.com

ವಾಶಿಂಗ್ಟನ್, ನ. 24: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ತನ್ನ ಮುಂಬರುವ ಸರಕಾರದ ಸಚಿವ ಸಂಪುಟದ ಕೆಲವು ಪ್ರಮುಖ ಸದಸ್ಯರನ್ನು ಸೋಮವಾರ ಹೆಸರಿಸಿದ್ದಾರೆ. ದೀರ್ಘಾವಧಿಯ ವಿದೇಶ ನೀತಿ ಸಲಹೆಗಾರ ಆ್ಯಂಟನಿ ಬ್ಲಿಂಕೆನ್ ನೂತನ ವಿದೇಶ ಕಾರ್ಯದರ್ಶಿಯಾದರೆ, ಮಾಜಿ ವಿದೇಶ ಕಾರ್ಯದರ್ಶಿ ಜಾನ್ ಕೆರಿ ವಿಶೇಷ ಪರಿಸರ ರಾಯಭಾರಿಯಾಗಲಿದ್ದಾರೆ.

ವಲಸೆಯ ಉಸ್ತುವಾರಿಯನ್ನು ಹೊಂದಿರುವ ಆಂತರಿಕ ಭದ್ರತಾ ಇಲಾಖೆಯ ಕಾರ್ಯದರ್ಶಿಯಾಗಿ ಕ್ಯೂಬಾ ಸಂಜಾತ ವಕೀಲ ಅಲೆಜಾಂಡ್ರೊ ಮಯೊರ್ಕಾಸ್‌ರನ್ನು ಬೈಡನ್ ನೇಮಿಸಿದ್ದಾರೆ. ಅವರು ಅವೆುರಿಕ ಸರಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಿರುವ ಮೊದಲ ಲ್ಯಾಟಿನೊ (ಲ್ಯಾಟಿನ್ ಅಮೆರಿಕ ಮೂಲದ ವ್ಯಕ್ತಿ) ಆಗಿದ್ದಾರೆ.

ಗುಪ್ತಚರ ಸಂಸ್ಥೆ ಸಿಐಎಯ ಮಾಜಿ ಉಪ ನಿರ್ದೇಶಕಿ ಆ್ಯವ್ರಿಲ್ ಹೇನ್ಸ್ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ನಿರ್ದೇಶಕಿಯಾಗಲಿದ್ದಾರೆ. ಅವರು ಈ ಹುದ್ದೆಯನ್ನು ವಹಿಸಿಕೊಳ್ಳುತ್ತಿರುವ ಮೊದಲ ಮಹಿಳೆಯಾಗಲಿದ್ದಾರೆ.

ದೀರ್ಘಾವಧಿಯ ರಾಜತಾಂತ್ರಿಕೆ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುತ್ತಾರೆ. ಅವರಿಗೆ ಅಮೆರಿಕ ಸಚಿವ ಸಂಪುಟದ ಸದಸ್ಯರ ಸ್ಥಾನಮಾನವಿದೆ.

ಬೈಡನ್ ಉಪಾಧ್ಯಕ್ಷರಾಗಿದ್ದಾಗ ಅವರ ಭದ್ರತಾ ಸಲಹೆಗಾರರಾಗಿದ್ದ ಜೇಕ್ ಸಲಿವಾನ್‌ರನ್ನು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಿಸಲಾಗಿದೆ.

ಈ ಎಲ್ಲರೂ 2009-2017ರ ಅವಧಿಯಲ್ಲಿ ಒಬಾಮ-ಬೈಡನ್ ಸರಕಾರದಲ್ಲಿ ಸೇವೆ ಸಲ್ಲಿಸಿರುವ ಅನುಭವಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News