ಲವ್‌ ಜಿಹಾದ್ ವಿರೋಧಿ ಅಧ್ಯಾದೇಶಕ್ಕೆ ಉ.ಪ್ರದೇಶ ಸಂಪುಟ ಅಂಗೀಕಾರ

Update: 2020-11-24 17:18 GMT

ಲಕ್ನೊ, ನ.24: ವಿವಾಹ ಉದ್ದೇಶದ ಧಾರ್ಮಿಕ ಮತಾಂತರದ ವಿರುದ್ಧ ಕಠಿಣ ಕ್ರಮಕ್ಕೆ ಅವಕಾಶ ನೀಡುವ ಕರಡು ಅಧ್ಯಾದೇಶಕ್ಕೆ ಉತ್ತರಪ್ರದೇಶದ ಸಚಿವ ಸಂಪುಟ ಮಂಗಳವಾರ ಅಂಗೀಕಾರ ನೀಡಿದೆ ಎಂದು ಸರಕಾರದ ವಕ್ತಾರರು ಹೇಳಿದ್ದಾರೆ.

ಲಕ್ನೊದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಧ್ಯಾದೇಶಕ್ಕೆ ಅಂಗೀಕಾರ ದೊರಕಿದೆ. ‘ಅಕ್ರಮ ಧಾರ್ಮಿಕ ಮತಾಂತರದ ವಿರುದ್ಧ ಅಧ್ಯಾದೇಶ ಜಾರಿಗೆ ಉತ್ತರ ಪ್ರದೇಶ ಸಚಿವ ಸಂಪುಟ ನಿರ್ಧರಿಸಿದೆ. ಬಲವಂತದ ಧಾರ್ಮಿಕ ಮತಾಂತರಕ್ಕೆ 15,000 ರೂ. ದಂಡದ ಜೊತೆಗೆ 1ರಿಂದ 5 ವರ್ಷದ ಜೈಲುಶಿಕ್ಷೆ ವಿಧಿಸಲು ಅಧ್ಯಾದೇಶದಲ್ಲಿ ಅವಕಾಶವಿದೆ. ಅಪ್ರಾಪ್ತ ವಯಸ್ಕರ , ಎಸ್‌ಸಿ/ಎಸ್‌ಟಿ ಸಮುದಾಯದವರ ಮತಾಂತರಕ್ಕೆ 25,000 ರೂ.ದಂಡದ ಜೊತೆಗೆ 3ರಿಂದ 10 ವರ್ಷದ ಜೈಲುಶಿಕ್ಷೆ ವಿಧಿಸಲಾಗುವುದು ’ ಎಂದು ರಾಜ್ಯದ ಸಚಿವ ಸಿದ್ದಾರ್ಥನಾಥ್ ಸಿಂಗ್ ಹೇಳಿದ್ದಾರೆ. ಧಾರ್ಮಿಕ ಮತಾಂತರ ವಿರೋಧಿ ಮಸೂದೆ 2020ಯನ್ನು ಉತ್ತರಪ್ರದೇಶ ವಿಧಾನಸಭೆಯ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ. ಪ್ರೀತಿಯ ಹೆಸರಿನಲ್ಲಿ ನಡೆಯುವ ಧಾರ್ಮಿಕ ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸುವಂತೆ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದರು. ಉತ್ತರಪ್ರದೇಶದ ಕಾನೂನು ಸಚಿವಾಲಯದ ಪರಿಶೀಲನೆಯಲ್ಲಿರುವ ಲವ್‌ ಜಿಹಾದ್ ವಿರುದ್ಧದ ಕಾನೂನನ್ನು ರಾಜ್ಯ ಕಾನೂನು ಆಯೋಗ ಸಿದ್ಧಪಡಿಸಿದೆ. ಇದನ್ನು ಕಳೆದ ವರ್ಷವೇ ಸರಕಾರಕ್ಕೆ ಸಲ್ಲಿಸಿದ್ದರೂ ಸರಕಾರ ಕೆಲವೊಂದು ತಿದ್ದುಪಡಿ ಸೂಚಿಸಿದ ಹಿನ್ನೆಲೆಯಲ್ಲಿ ತಿದ್ದುಪಡಿ ಪ್ರತಿಯನ್ನು ಇತ್ತೀಚೆಗೆ ರಾಜ್ಯದ ಗೃಹ ಇಲಾಖೆಗೆ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News