ಬಿಜೆಪಿ ನಾಯಕನ 'ಸರ್ಜಿಕಲ್ ಸ್ಟ್ರೈಕ್' ಹೇಳಿಕೆಗೆ ಉವೈಸಿ ತಿರುಗೇಟು

Update: 2020-11-25 08:37 GMT

ಹೈದರಾಬಾದ್: ಹೈದರಾಬಾದ್ ಓಲ್ಡ್ ಸಿಟಿ ಪ್ರದೇಶದಲ್ಲಿ ಒಳ ನುಸುಳುವವರ ಮೇಲೆ ನಮ್ಮ ಪಕ್ಷ 'ಸರ್ಜಿಕಲ್ ಸ್ಟ್ರೈಕ್' ನಡೆಸಲಿದೆ ಎಂದು ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಬೆದರಿಕೆ ಹಾಕಿದ್ದಾರೆ. ನಗರದಲ್ಲಿ ವಾಸವಾಗಿರುವ ಅಕ್ರಮ ಬಾಂಗ್ಲಾದೇಶಿಗಳು, ಪಾಕಿಸ್ತಾನಿಗಳು ಹಾಗೂ ರೋಹಿಂಗ್ಯನ್ನರನ್ನು ಉಲ್ಲೇಖಿಸಿ ಒಳ ನುಸುಳುವವರು ಎಂಬ ಪದವನ್ನು ಸಂಜಯ್ ಉಲ್ಲೇಖಿಸಿದ್ದಾರೆ.

"ಅಕ್ರಮವಾಗಿ ಒಳನುಗ್ಗುವವರ ಮತಗಳನ್ನು ಬಳಸಿಕೊಂಡು ನೀವು ಚುನಾವಣೆಯಲ್ಲಿ ಗೆಲ್ಲಲು ಬಯಸುತ್ತೀರಿ. ಅದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ನಾವು ಹೈದರಾಬಾದ್‌ಗೆ ಬಿಜೆಪಿ ಮೇಯರ್ ಆಯ್ಕೆ ಮಾಡಿದ ನಂತರ ಅಕ್ರಮ ನುಸುಳುಕೋರರನ್ನು ಹೊರಹಾಕುತ್ತೇವೆ" ಎಂದು ಸಂಜಯ್ ಹೇಳಿದರು.

ಬಿಜೆಪಿ ನಾಯಕನ ಹೇಳಿಕೆಯನ್ನು ವ್ಯಂಗ್ಯವಾಡಿದ ಎಐಎಂಐಎಂ ನಾಯಕ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ, "ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನೀಯರ ವಿರುದ್ಧ ನೀವು ಏಕೆ ಯಾವುದೇ 'ಸರ್ಜಿಕಲ್ ಸ್ಟ್ರೈಕ್' ನಡೆಸಿಲ್ಲ ಎಂದು ಪ್ರಶ್ನಿಸಿದರು. ನೀವು ಯಾರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತೀರಿ? ಚೀನಾದ ಸೇನಾ ಪಡೆ ಪಿಎಲ್‌ಎ ಲಡಾಖ್‌ನಲ್ಲಿ 970 ಚದರ ಕಿ.ಮೀ.ಆಕ್ರಮಿಸಿಕೊಂಡಿದೆ...ಅವರು ಚೀನಾದ ಹೆಸರನ್ನೇ ಎತ್ತುವುದಿಲ್ಲ" ಎಂದು ಉವೈಸಿ ವ್ಯಂಗ್ಯವಾಡಿದರು.

ಹೈದರಾಬಾದ್‌ನಲ್ಲಿ ಎಷ್ಟು ಜನರು ಪಾಕಿಸ್ತಾನಿಗಳು ಅಥವಾ ರೋಹಿಂಗ್ಯನ್ನರು ಇದ್ದಾರೆ ಎಂದು ನಮಗೆ ತಿಳಿಸಿ. ನೆನಪಿಡಿ, ಹೈದರಾಬಾದ್‌ನಲ್ಲಿರುವವರು-ಹಿಂದೂ, ಮುಸ್ಲಿಂ, ದಲಿತ, ಸಿಖ್, ಕ್ರಿಶ್ಚಿಯನ್-ಎಲ್ಲರೂ ಭಾರತೀಯರು. ನಾವು ಪಾಕಿಸ್ತಾನಿಗಳನ್ನು ಇಲ್ಲಿಗೆ ಬರಲು ಬಿಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News