ನಿತೀಶ್ ಕುಮಾರ್ ಮತ್ತೆ ಸಿಎಂ ಆದದ್ದಕ್ಕೆ ನಾಲ್ಕನೇ ಬಾರಿ ಬೆರಳು ಕತ್ತರಿಸಿದ!

Update: 2020-11-25 13:17 GMT
Photo: Twitter(@ians_india)

ಪಾಟ್ನ: ಬಿಹಾರ ಸಿಎಂ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ ಅನಿಲ್ ಶರ್ಮ, ಸೋಮವಾರ  ತನ್ನ  ಎಡಗೈಯ ನಾಲ್ಕನೇ ಬೆರಳನ್ನು ಕುಯ್ದು ಅದನ್ನು ಸ್ಥಳೀಯ ಆರಾಧ್ಯ ದೇವರಾದ ಗೊರಯ್ಯ ಬಾಬಾಗೆ ಅರ್ಪಿಸಿದ್ದಾನೆ. ನಿತೀಶ್ ಅವರು ನಾಲ್ಕನೇ ಬಾರಿ ರಾಜ್ಯದ ಸಿಎಂ ಆದ ನಂತರ ಆತ ತನ್ನ ಬೆರಳು ದೇವರಿಗೆ ಅರ್ಪಿಸಿದ್ದಾನೆ.

ಅಷ್ಟಕ್ಕೂ ಆತ ಈ ರೀತಿ ಬೆರಳನ್ನು ಕುಯ್ದು ದೇವರಿಗೆ ಅರ್ಪಿಸಿರುವುದು ಇದು ಮೊದಲನೇ ಬಾರಿಯಲ್ಲ, ಬದಲು ನಾಲ್ಕನೇ ಬಾರಿಯಾಗಿದೆ. ಜೆಹಾನಾಬಾದ್ ಜಿಲ್ಲೆಯ ಘೋಸಿ ಬ್ಲಾಕಿನ ವೈನಾ ಗ್ರಾಮದ ನಿವಾಸಿಯಾಗಿರುವ ಅನಿಲ್ ಶರ್ಮಾನ ವಯಸ್ಸು 45. ನಿತೀಶ್ ಅವರಿಗೆ ವಿಜಯ ಕರುಣಿಸಿದ್ದಕ್ಕಾಗಿ ಆತ ತನ್ನ ಬೆರಳನ್ನು ಬಲಿದಾನಗೈದಿದ್ದಾನೆಂದು ಗ್ರಾಮಸ್ಥರು ಹೇಳುತ್ತಾರೆ.

ಚೆನ್ನೈಯಲ್ಲಿ ತೋಟವೊಂದರ ಮಾಲಿ ಆಗಿ ಕೆಲಸ ಮಾಡುವ ಶರ್ಮ ಇತ್ತೀಚೆಗಿನ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಊರಿಗೆ ವಾಪಸಾಗಿದ್ದ. ನಿತೀಶ್ ಮತ್ತೆ ಅಧಿಕಾರಕ್ಕೆ ಬಂದರೆ ನನ್ನ ಬೆರಳನ್ನು ತ್ಯಾಗ ಮಾಡುವುದಾಗಿ ಮಾತು ನೀಡಿದ್ದೆ ಎಂದು ಆತ ಹೇಳುತ್ತಾನೆ.

ಸ್ಥಳೀಯವಾಗಿ ಆಲಿ ಬಾಬಾ ಎಂದೇ ಕರೆಯಲ್ಪಡುವ ಶರ್ಮ ಹೇಳುವಂತೆ ರಾಜ್ಯದಲ್ಲಿ ಅಭಿವೃದ್ಧಿ ಸಾಧಿಸಲು ಸಮರ್ಥ ನಾಯಕ ನಿತೀಶ್ ಒಬ್ಬರೇ ಆಗಿದ್ದಾರೆ. "ನಾನು ಅವರನ್ನು ಭೇಟಿಯಾಗಿಲ್ಲ ಆದರೆ ಅವರ ಯೋಜನೆಗಳ ದೊಡ್ಡ ಅಭಿಮಾನಿ ನಾನು,'' ಎಂದು ಆತ ಹೇಳುತ್ತಾನೆ.

ಆತ ನಿತೀಶ್ 2005ರಿಂದ ಸಿಎಂ ಆದಾಗಲೆಲ್ಲಾ ತನ್ನ ಬೆರಳು ಕುಯ್ದು ದೇವರಿಗೆ ಅರ್ಪಿಸಿದ್ದಾನೆ. 2015ರಲ್ಲಿ ಶರ್ಮ ತನ್ನ ಮೂರನೇ ಬೆರಳು ದೇವರಿಗೆ ಅರ್ಪಿಸಿದ ನಂತರ ನಿತೀಶ್ ಅವರನ್ನು ಭೇಟಿಯಾಗಲು ಆತ ಯತ್ನಿಸಿದ್ದರೂ ವಿಫಲನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News