ಭಯೋತ್ಪಾದಕರ ಆಶ್ರಯಸ್ಥಾನ ಪಾಕಿಸ್ತಾನ: ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತದಿಂದ ತಿರುಗೇಟು

Update: 2020-11-25 14:07 GMT
ಫೋಟೊ ಕೃಪೆ: twitter.com

ವಿಶ್ವಸಂಸ್ಥೆ (ನ್ಯೂಯಾರ್ಕ್), ನ. 25: ಪಾಕಿಸ್ತಾನದ ವಿಶ್ವಸಂಸ್ಥೆ ರಾಯಭಾರಿಯು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ಗೆ ಭಾರತದ ವಿರುದ್ಧದ ದೂರುಗಳ ಪಟ್ಟಿಯನ್ನು ಸಲ್ಲಿಸಿರುವುದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಭಾರತ, ಅಲ್-ಖಾಯಿದ ಭಯೋತ್ಪಾದಕ ಗುಂಪಿನ ಸ್ಥಾಪಕ ಉಸಾಮ ಬಿನ್ ಲಾದನ್ ಪಾಕಿಸ್ತಾನದ ಅಬೊಟಾಬಾದ್ ನಗರದಲ್ಲಿ ವರ್ಷಗಳ ಕಾಲ ಬದುಕಿದ್ದನು ಎಂಬುದನ್ನು ಜ್ಞಾಪಿಸಿದೆ.

 ಉಸಾಮ ಬಿನ್ ಲಾದನ್ ಅಬೊಟಾಬಾದ್‌ನಲ್ಲಿ ಹಲವು ವರ್ಷಗಳ ಕಾಲ ಅಡಗಿದ್ದನು ಹಾಗೂ ಅವನನ್ನು ಅಂತಿಮವಾಗಿ 2011 ಮೇ ತಿಂಗಳಲ್ಲಿ ಅಮೆರಿಕದ ನೇವಿ ಸೀಲ್ಸ್ ಪಡೆಯು ಹತ್ಯೆಗೈಯಿತು ಎಂಬುದಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಟ್ವೀಟ್ ಮಾಡಿದ್ದಾರೆ.

ವಿಶ್ವಸಂಸ್ಥೆ ಘೋಷಿತ ಭಯೋತ್ಪಾದಕರ ಪಟ್ಟಿಯಲ್ಲಿರುವ ಹೆಚ್ಚಿನವರು ಪಾಕಿಸ್ತಾನದಲ್ಲಿದ್ದಾರೆ ಎಂಬುದಾಗಿಯೂ ಅವರು ತಿರುಗೇಟು ನೀಡಿದ್ದಾರೆ. ಪಾಕಿಸ್ತಾನವು ವಿಶ್ವಸಂಸ್ಥೆಗೆ ಸಲ್ಲಿಸಿರುವ ಸುಳ್ಳುಗಳ ಪಟ್ಟಿಗೆ ಯಾವ ವಿಶ್ವಾಸಾರ್ಹತೆಯೂ ಇಲ್ಲ ಎಂದು ಅವರು ಹೇಳಿದ್ದಾರೆ.

ಕಪೋಲಕಲ್ಪಿತ ದಾಖಲೆಗಳನ್ನು ಸೃಷ್ಟಿಸುವುದು ಹಾಗೂ ಸುಳ್ಳು ವಿವರಣೆಗಳನ್ನು ಒದಗಿಸುವುದು ಭಯೋತ್ಪಾದಕರ ಆಶ್ರಯ ಸ್ಥಾನವಾಗಿರುವ ಪಾಕಿಸ್ತಾನಕ್ಕೆ ಹೊಸತಲ್ಲ ಎಂದು ಭಾರತೀಯ ರಾಯಭಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News